ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಬಿಸಿಬಿಸಿ ಗಾಸಿಪ್‌ಗಳು, ನಟ-ನಟಿಯರ ಖಾಸಗಿ ಜೀವನದ ಸತ್ಯಗಳು, ಪ್ರೀತಿ-ವಿಚ್ಛೇದನದ ಕಥೆಗಳು ಹಾಗೂ ದೊಡ್ಡ ದೊಡ್ಡ ವಿವಾದಗಳಿಗೆ ವೇದಿಕೆಯಾಗಿದ್ದ ಭಾರತದ ಅತ್ಯಂತ ಜನಪ್ರಿಯ ಟಾಕ್ ಶೋ ‘ಕಾಫಿ ವಿತ್ ಕರಣ್’ ಈಗ ತನ್ನ ಸುದೀರ್ಘ ಪ್ರಯಾಣಕ್ಕೆ ಪೂರ್ಣವಿರಾಮ ಇಡಲು ಸಜ್ಜಾಗಿದೆ. ಹೌದು, ಬಾಲಿವುಡ್‌ನ ಪ್ರಸಿದ್ಧ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ತಮ್ಮ ಈ ಐಕಾನಿಕ್ ಟಾಕ್ ಶೋ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.
ಬುಧವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರೋಮೋ ಒಂದನ್ನು ಹಂಚಿಕೊಂಡಿರುವ ಕರಣ್ ಜೋಹರ್, “ನಾವು ಮಾತನಾಡಬೇಕಾಗಿದೆ, ಖಂಡಿತವಾಗಿಯೂ ಕಾಫಿ ಕುಡಿಯುತ್ತಾ…” ಎಂದು ಬರೆದುಕೊಂಡಿದ್ದಾರೆ. ಮುಂಬರುವ 9ನೇ ಸೀಸನ್ ಈ ಶೋನ ಕೊನೆಯ ಸೀಸನ್ ಆಗಿರಲಿದ್ದು, ಇದು ಅಕ್ಟೋಬರ್ 14ರಿಂದ ಜಿಯೋ ಹಾಟ್‌ಸ್ಟಾರ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗಲಿದೆ.
ಹಂಚಿಕೊಳ್ಳಲಾದ ವೀಡಿಯೊದಲ್ಲಿ ಕರಣ್ ಜೋಹರ್ ಅತ್ಯಂತ ಭಾವುಕರಾಗಿ ಮಾತನಾಡಿದ್ದಾರೆ. 2004ರಲ್ಲಿ ತಾವು ಈ ಶೋನ ಕಲ್ಪನೆಯನ್ನು ತಮ್ಮ ತಂದೆ ಯಶ್ ಜೋಹರ್ ಅವರ ಬಳಿ ಹೇಳಿಕೊಂಡಿದ್ದನ್ನು ನೆನಪಿಸಿಕೊಂಡಿದ್ದಾರೆ. “ಸ್ನೇಹಿತರ ಜೊತೆ ಹರಟೆ ಹೊಡೆಯಲು ನಿನಗೆ ಯಾರು ದುಡ್ಡು ಕೊಡ್ತಾರೆ?” ಎಂದು ಅಂದು ತಂದೆ ತಮಾಷೆ ಮಾಡಿದ್ದರಂತೆ. ಆದರೆ, ಶೋ ಆರಂಭವಾದ ಕೆಲವೇ ದಿನಗಳಲ್ಲಿ ತಂದೆ ತೀರಿಕೊಂಡರು. 2004ರ ಆಗಸ್ಟ್‌ನಲ್ಲಿ ಆರಂಭವಾದ ಈ ಪಯಣ, ಕಳೆದ ಎರಡು ದಶಕಗಳಿಂದ ಭಾರತೀಯ ಕಿರುತೆರೆ ಹಾಗೂ ಒಟಿಟಿ ಲೋಕದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತು.
https://www.instagram.com/reel/Dd5sfdVsoU-/?utm_source=ig_web_button_share_sheet
ಈ ಶೋನಲ್ಲಿ ಬರದ ಬಾಲಿವುಡ್ ನಟ-ನಟಿಯರೇ ಇಲ್ಲ ಎನ್ನಬಹುದು. ಕರಣ್ ಜೋಹರ್ ಪ್ರೋಮೋದಲ್ಲಿ ತಮಾಷೆಯಾಗಿ ಹೇಳುವಂತೆ “ಈ ಶೋನಿಂದಾಗಿ ನಾನು ಇಂದಿಗೂ ‘ನೆಪೋಟಿಸಂ’ ಎಂಬ ಪದದ ಜೊತೆ ಹೆಣಗಾಡುತ್ತಿದ್ದೇನೆ. ಇಲ್ಲಿಗೆ ಬಂದ ಎಷ್ಟೋ ಜೋಡಿಗಳು ಆಮೇಲೆ ಮದುವೆಯಾದರು, ಇನ್ನು ಕೆಲವರು ದೂರವಾದರು. ಅಷ್ಟೇ ಏಕೆ, ಕೆಲವರ ವೃತ್ತಿಜೀವನವೇ ಈ ಶೋನಿಂದಾಗಿ ಮುಗಿದುಹೋಗುವ ಹಂತಕ್ಕೆ ಬಂದಿತ್ತು!” ಎಂದು ಕರಣ್ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಶೋ ಅಂತ್ಯದ ಕುರಿತು ಮಾತನಾಡಿರುವ ಕರಣ್, “ಕೆಲವು ಪಯಣಗಳನ್ನು ನಾವು ಕೊನೆಗೊಳಿಸಬೇಕು ಎಂದು ಪ್ಲಾನ್ ಮಾಡುವುದಿಲ್ಲ, ಆದರೆ ನಂತರ ಅರಿವಾಗುತ್ತದೆ ಇವುಗಳನ್ನು ಇಲ್ಲಿಗೆ ಮುಗಿಸುವ ಸಮಯ ಬಂದಿದೆ ಎಂದು. ‘ಕಾಫಿ ವಿತ್ ಕರಣ್’ ನನ್ನ ಜೀವನದ ಅದ್ಭುತ ಭಾಗ. ಇದು ನನಗೆ ಉತ್ತಮ ಸ್ನೇಹಿತರನ್ನು, ಮರೆಯಲಾಗದ ನೆನಪುಗಳನ್ನು, ಅತಿಯಾದ ಪ್ರೀತಿಯನ್ನು ಮತ್ತು ಸಹಜವಾಗಿ ಒಂದಿಷ್ಟು ವಿವಾದಗಳನ್ನು ನೀಡಿದೆ. ಆದರೆ ಇವೆಲ್ಲದರ ನಡುವೆ ನನ್ನ ಜೊತೆ ನಿಂತಿದ್ದು ನನ್ನ ಪ್ರೀತಿಯ ವೀಕ್ಷಕರು” ಎಂದಿದ್ದಾರೆ.
ಅಕ್ಟೋಬರ್ 14ರಿಂದ ಆರಂಭವಾಗುವ ಈ ಅಂತಿಮ ಸೀಸನ್‌ನಲ್ಲಿ ಎಂದಿನಂತೆ ಸೆಲೆಬ್ರಿಟಿಗಳ ಬಿಸಿಬಿಸಿ ಗಾಸಿಪ್, ಚುರುಕಿನ ‘ರ‍್ಯಾಪಿಡ್ ಫೈರ್ ರೌಂಡ್’ ಹಾಗೂ ಆಕರ್ಷಕ ‘ಕಾಫಿ ಹ್ಯಾಂಪರ್’ ಇರಲಿವೆ. ಕೊನೆಯ ಬಾರಿಗೆ ಬಾಲಿವುಡ್ ಮಂದಿಯ ಸೀಕ್ರೆಟ್‌ಗಳನ್ನು ಹೊರತೆಗೆಯಲು ಕರಣ್ ಜೋಹರ್ ಪೂರ್ಣ ಸಜ್ಜಾಗಿದ್ದಾರೆ.



