September 30, 2026
Wednesday, September 30, 2026
spot_img

ಗುತ್ತಿಗೆದಾರರ ಬಾಕಿ ಬಿಲ್ ವಿವಾದ: ಸಿಎಂ ಡಿ.ಕೆ. ಶಿವಕುಮಾರ್‌ಗೆ ಪತ್ರ ಬರೆದ ಸಂಘ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಸುಮಾರು 38,000 ಕೋಟಿ ರೂ. ಬಿಲ್ ಬಿಡುಗಡೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಈಗ ನೇರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಧ್ಯಸ್ಥಿಕೆಗೆ ಮೊರೆ ಹೋಗಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆಸಿದ ಸುದೀರ್ಘ ಮಾತುಕತೆ ವಿಫಲವಾದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

ನುಡಿದಂತೆ ನಡೆಯುತ್ತೇವೆ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಮೇಲೆ ರಾಜ್ಯದ ಸುಮಾರು 1.50 ಲಕ್ಷ ಗುತ್ತಿಗೆದಾರರು ಅಪಾರ ನಂಬಿಕೆ ಇಟ್ಟಿದ್ದರು. ಆದರೆ, ಗಡುವಿನ ಒಳಗಾಗಿ ಕೆಲಸ ಮುಗಿಸಿದರೂ ಕಳೆದ 3-4 ವರ್ಷಗಳಿಂದ ಬಿಲ್ ಬಿಡುಗಡೆಯಾಗದೆ ಗುತ್ತಿಗೆದಾರರು ಕಚೇರಿಗಳಿಂದ ಕಚೇರಿಗಳಿಗೆ ಅಲೆಯುವಂತಾಗಿದೆ ಎಂದು ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಹಾಗೂ ಪ್ರಧಾನ ಕಾರ್ಯದರ್ಶಿ ಜೆ.ಎಂ. ನಂದಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಜೊತೆಗಿನ ಸಭೆ ವಿಫಲ

ಗುತ್ತಿಗೆದಾರರ ಸಂಘದ ಪತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗಿನ ಹಳೆಯ ಭೇಟಿಗಳನ್ನು ನೆನಪಿಸಲಾಗಿದೆ. ʼನಾವು ಮಾರ್ಚ್ 2023 ರಲ್ಲಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಮತ್ತು ಅವರು ಮುಖ್ಯಮಂತ್ರಿಯಾದ ನಂತರ ಜೂನ್ 30, 2026 ರಂದು ಭೇಟಿಯಾಗಿದ್ದೆವು. ಎರಡೂವರೆ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರೂ ಇಲಾಖೆಗಳಿಂದ ಹಣ ಬಿಡುಗಡೆಯಾಗಿಲ್ಲ. ಈವರೆಗೂ ನಮಗೆ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲʼ ಎಂದು ಸಂಘದ ಪದಾಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.

ಆರ್ಥಿಕ ಬಿಕ್ಕಟ್ಟಿಗೆ ಯಡಿಯೂರಪ್ಪ ಕಾರಣ

ರಾಜ್ಯದಲ್ಲಿ ಸೃಷ್ಟಿಯಾಗಿರುವ ಈ ಭಾರಿ ಪ್ರಮಾಣದ ಆರ್ಥಿಕ ಹೊರಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಕಾರಣ ಎಂದು ಗುತ್ತಿಗೆದಾರರ ಸಂಘ ಗಂಭೀರ ಆರೋಪ ಮಾಡಿದೆ. ಯಡಿಯೂರಪ್ಪ ಅವರು ತಮ್ಮ ಅಧಿಕಾರಾವಧಿಯಲ್ಲಿ ಬಜೆಟ್ ಮಿತಿಗಿಂತಲೂ ಅಧಿಕ ಕಾಮಗಾರಿಗಳನ್ನು ಮಂಜೂರು ಮಾಡಿ, ಸರ್ಕಾರದ ಮೇಲೆ ಅನಗತ್ಯ ಆರ್ಥಿಕ ಹೊರೆ ಹೇರಿದ್ದರು ಎಂದು ಪತ್ರದಲ್ಲಿ ದೂರಲಾಗಿದೆ.

ಪ್ಯಾಕೇಜ್ ಟೆಂಡರ್‌ನಿಂದ ತಾಲೂಕು ಗುತ್ತಿಗೆದಾರರು ಬೀದಿಗೆ

ಸರ್ಕಾರದ ಹೊಸ ನಿಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಂಘವು, ಅಭಿವೃದ್ಧಿ ಇಲಾಖೆಗಳಲ್ಲಿ 8 ರಿಂದ 10 ಸಣ್ಣ ಕಾಮಗಾರಿಗಳನ್ನು ಒಟ್ಟಿಗೆ ಸೇರಿಸಿ ದೊಡ್ಡ ‘ಪ್ಯಾಕೇಜ್ ಟೆಂಡರ್’ ಮಾಡುವ ವ್ಯವಸ್ಥೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದೆ. ಇದರಿಂದಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಸ್ಥಳೀಯ ಗುತ್ತಿಗೆದಾರರಿಗೆ ಟೆಂಡರ್ ಸಿಗುತ್ತಿಲ್ಲ. ಹೊರ ರಾಜ್ಯದ ಮತ್ತು ಹೊರ ಜಿಲ್ಲೆಯ ಪ್ರಭಾವಿ ಗುತ್ತಿಗೆದಾರರು ಇಡೀ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದ್ದಾರೆ ಎಂದು ಸಂಘ ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ:

ಅಲ್ಲದೆ, ಇ-ಪ್ರೊಕ್ಯೂರ್‌ಮೆಂಟ್‌ನ ಕಾಂಟ್ರಾಕ್ಟ್ ಮ್ಯಾನೇಜ್‌ಮೆಂಟ್ ಮಾಡ್ಯೂಲ್‌ನಲ್ಲಿ ಕಾರ್ಮಿಕರ ಸಂಪೂರ್ಣ ವಿವರಗಳನ್ನು ಅಪ್‌ಲೋಡ್ ಮಾಡಿದ ನಂತರವೇ ಬಿಲ್ ಪಾವತಿಸಲಾಗುವುದು ಎಂಬ ಸರ್ಕಾರದ ಇತ್ತೀಚಿನ ಆದೇಶವನ್ನು ಹಿಂಪಡೆಯಬೇಕು ಎಂದೂ ಪತ್ರದಲ್ಲಿ ಆಗ್ರಹಿಸಲಾಗಿದೆ.

Must Read