September 30, 2026
Wednesday, September 30, 2026
spot_img

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ: ಪಾಲಿಕೆ ಸಭೆಯಲ್ಲಿ ಗೊತ್ತುವಳಿ ಅಂಗೀಕಾರ

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಸ್ಪಷ್ಟಪಡಿಸುವ ಗೊತ್ತುವಳಿಯನ್ನು ಬೆಳಗಾವಿ ಮಹಾನಗರ ಪಾಲಿಕೆಯ ಪರಿಷತ್ ಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು.

ಈ ವಿಚಾರದ ಬಗ್ಗೆ ಕನ್ನಡಪರ ಸಂಘಟನೆಗಳು ಕಳೆದ ಆರು ತಿಂಗಳುಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಮಹತ್ವದ ಪ್ರತಿಫಲ ದೊರೆತಂತಾಗಿದೆ.

1988ರಲ್ಲಿ ಅಂದಿನ ರಾಜ್ಯ ಸರ್ಕಾರವು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿತ್ತು. ಇದೇ ವಿಚಾರವಾಗಿ ಸರ್ಕಾರವು ಬೆಳಗಾವಿ ಮಹಾನಗರ ಪಾಲಿಕೆಗೆ ಈ ಹಿಂದೆ ಎರಡು ಬಾರಿ ಪತ್ರಗಳ ಮೂಲಕ ನಿರ್ದೇಶನ ನೀಡಿತ್ತು. ಇದೀಗ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಪಾಲಿಕೆ ಪರಿಷತ್ ಸಭೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಗೊತ್ತುವಳಿಯನ್ನು ಅಂಗೀಕರಿಸಲಾಯಿತು.

ಪಾಲಿಕೆಯ ಮೇಯರ್ ಪ್ರೀತಿ ಕಾಮಕರ್ ಅವರು, ಸರ್ಕಾರದ ಗೊತ್ತುವಳಿ ಹಾಗೂ ಆದೇಶವನ್ನು ಸಭೆಯಲ್ಲಿ ಓದಿ, ಸರ್ಕಾರದ ನಿರ್ದೇಶನಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಎಂಇಎಸ್ ಸದಸ್ಯ ರವಿ ಸಾಳೋಕ್ಕಿ ವಿರೋಧ ವ್ಯಕ್ತಪಡಿಸಿದರು. ಗೊತ್ತುವಳಿ ಅಂಗೀಕಾರದ ಬಳಿಕ ಪಾಲಿಕೆ ಸದಸ್ಯ ರಮೇಶ್ ಸೊಂಟಕ್ಕಿ ಹರ್ಷ ವ್ಯಕ್ತಪಡಿಸಿ, ಕಳೆದ ಆರು ತಿಂಗಳುಗಳಿಂದ ವಿವಿಧ ಕನ್ನಡಪರ ಸಂಘಟನೆಗಳು ನಡೆಸಿದ ಹೋರಾಟಕ್ಕೆ ಇದೀಗ ಪ್ರತಿಫಲ ದೊರೆತಿದೆ ಎಂದರು.

ಇದನ್ನೂ ಓದಿ:

ಪಾಲಿಕೆಯ ಸಭೆಯಲ್ಲಿ ಗೊತ್ತುವಳಿ ಅಂಗೀಕಾರವಾಗಿರುವುದಕ್ಕೆ ವಿವಿಧ ಸದಸ್ಯರು ಸಂತಸ ವ್ಯಕ್ತಪಡಿಸಿದರು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವಿಗೆ ಪಾಲಿಕೆ ಬದ್ಧವಾಗಿರುವುದನ್ನು ಗೊತ್ತುವಳಿ ಮೂಲಕ ಮತ್ತೊಮ್ಮೆ ದಾಖಲಿಸಲಾಗಿದೆ ಎಂದು ಸದಸ್ಯರು ಅಭಿಪ್ರಾಯಪಟ್ಟರು.

Must Read