ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜಧಾನಿಯ ಫ್ರೀಡಂ ಪಾರ್ಕ್ನಲ್ಲಿ ಕಳೆದ ಐದು ದಿನಗಳಿಂದ ಅಹೋರಾತ್ರಿ ಸತ್ಯಾಗ್ರಹ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸ್ಯಾಂಡಲ್ವುಡ್ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಬೆಂಬಲ ಸೂಚಿಸಿದ್ದಾರೆ.
ನವೆಂಬರ್ 17ರಿಂದ ಆರಂಭವಾಗಿರುವ ಈ ಅನಿರ್ದಿಷ್ಟಾವಧಿ ಪ್ರತಿಭಟನೆಯ ವಿಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಸ್ಟೇಟಸ್ನಲ್ಲಿ ಹಂಚಿಕೊಂಡಿರುವ ರಮ್ಯಾ, ಹೋರಾಟನಿರತ ಮಹಿಳೆಯರ ಪರವಾಗಿ ಧ್ವನಿ ಎತ್ತಿದ್ದಾರೆ. “ಆಶಾ ಕಾರ್ಯಕರ್ತೆಯರು ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ನಿಜವಾದ ಬೆನ್ನೆಲುಬಾಗಿದ್ದಾರೆ. ಅವರಿಗೆ ಗೌರವಯುತವಾದ ಹಾಗೂ ನ್ಯಾಯಸಮ್ಮತವಾದ ವೇತನ ಸಕಾಲಕ್ಕೆ ಸಿಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ನೀಡಿರುವ ಭರವಸೆಗಳು ಆದಷ್ಟು ಬೇಗ ಅಧಿಕೃತ ನಿರ್ಧಾರವಾಗಿ ಬದಲಾಗುತ್ತವೆ ಎಂದು ನಾನು ಆಶಿಸುತ್ತೇನೆ” ಎಂದು ಅವರು ತಮ್ಮ ಪೋಸ್ಟ್ನಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.

ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳೇನು?
ಮಾಸಿಕ 15,000 ಗೌರವಧನ ನಿಗದಿಪಡಿಸಬೇಕು, ಬಾಕಿ ಉಳಿದಿರುವ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ನಿವೃತ್ತಿ ಸೌಲಭ್ಯಗಳನ್ನು ಕಲ್ಪಿಸಬೇಕು, ಆ್ಯಪ್ ಆಧಾರಿತ ಕೆಲಸದ ಹೆಚ್ಚುವರಿ ಒತ್ತಡವನ್ನು ತಗ್ಗಿಸಬೇಕು ಹಾಗೂ ವೈದ್ಯಕೀಯ ಮತ್ತು ತರಬೇತಿ ಭತ್ಯೆಗಳನ್ನು ನೀಡಬೇಕು ಎಂಬ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ಆಶಾ ಕಾರ್ಯಕರ್ತೆಯರು ಹಗಲು-ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.



