October 2, 2026
Friday, October 2, 2026
spot_img

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಂದುವರಿದ ಕಳ್ಳಾಟ: ದಾಳಿ ವೇಳೆ ಮೊಬೈಲ್, ಸಿಮ್ ಕಾರ್ಡ್‌, ನಗದು ಜಪ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಹಿರಿಯ ಅಧಿಕಾರಿಗಳು ನಡೆಸಿದ ದಿಢೀರ್‌ ತಪಾಸಣೆಯ ಸಂದರ್ಭದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಜೈಲಿನೊಳಗೆ ಬಚ್ಚಿಟ್ಟಿದ್ದ ಮೊಬೈಲ್ ಫೋನ್, ಸಿಮ್ ಕಾರ್ಡ್‌ಗಳು ಮತ್ತು ನಗದು ಹಣ ಪತ್ತೆಯಾಗಿದೆ.

ಕೆಲವೇ ದಿನಗಳ ಹಿಂದಷ್ಟೇ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಸೆಲ್‌ನಲ್ಲಿ ಸ್ಮಾರ್ಟ್‌ಫೋನ್ ಪತ್ತೆಯಾಗಿ ದೊಡ್ಡ ಮಟ್ಟದ ವಿವಾದ ಸೃಷ್ಟಿಸಿತ್ತು. ಆ ಬಿಸಿ ಆರುವ ಮುನ್ನವೇ ಈಗ ಮತ್ತೆ ನಿಷೇಧಿತ ವಸ್ತುಗಳು ಸಿಕ್ಕಿರುವುದು ಜೈಲು ಇಲಾಖೆಯ ಕರ್ತವ್ಯ ಲೋಪವನ್ನು ಎತ್ತಿ ತೋರಿಸುತ್ತಿದೆ.

ಟೋಪಿ ಒಳಗಿತ್ತು ಸಿಮ್ ಕಾರ್ಡ್‌

ಕಾರಾಗೃಹದ ಸೂಪರಿಂಟೆಂಡೆಂಟ್ ಬಿ.ಎಂ. ಕೊಟ್ರೇಶ್ ಅವರ ಮಾರ್ಗದರ್ಶನದಲ್ಲಿ ಭದ್ರತಾ ಸಿಬ್ಬಂದಿ ಬ್ಯಾರಕ್‌ಗಳ ಮೇಲೆ ಹಠಾತ್ ದಾಳಿ ನಡೆಸಿದ್ದಾರೆ. ಈ ವೇಳೆ ಮಲತೇಶ ಎಂಬ ಕೈದಿಯ ಬ್ಯಾಗ್‌ನಲ್ಲಿ ರಹಸ್ಯವಾಗಿಟ್ಟಿದ್ದ ಕೀಪ್ಯಾಡ್ ಮೊಬೈಲ್ ಫೋನ್ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಪಕ್ಕದ ಕೊಠಡಿಯಲ್ಲಿದ್ದ ಮತ್ತೊಬ್ಬ ಕೈದಿಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅಧಿಕಾರಿಗಳಿಗೆ ಆಘಾತ ಕಾಯ್ದಿತ್ತು. ಆತ ಧರಿಸಿದ್ದ ಟೋಪಿಯ ಒಳಗೆ ಅಡಗಿಸಿಟ್ಟಿದ್ದ ಮೂರು ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕಿಚನ್ ಟಾಯ್ಲೆಟ್‌ನಲ್ಲಿ ಸಿಕ್ಕಿತು ನೋಟುಗಳ ಕಂತೆ

ಬ್ಯಾರಕ್‌ಗಳ ಪರಿಶೀಲನೆ ಮುಗಿಸಿ ಜೈಲಿನ ಅಡುಗೆ ಮನೆಯತ್ತ ತೆರಳಿದ ಅಧಿಕಾರಿಗಳ ತಂಡಕ್ಕೆ ಶೌಚಾಲಯದ ಕೊಠಡಿಯೊಂದರಲ್ಲಿ ಅನುಮಾನಾಸ್ಪದ ಬ್ಯಾಗ್ ಒಂದು ಕಣ್ಣಿಗೆ ಬಿದ್ದಿದೆ. ಆ ಬ್ಯಾಗ್ ಅನ್ನು ಬಿಚ್ಚಿ ನೋಡಿದಾಗ ಅದರೊಳಗೆ ಒಟ್ಟು 8,500 ರೂ. ನಗದು ಪತ್ತೆಯಾಗಿದೆ. ಜೈಲಿನೊಳಗೆ ಕೈದಿಗಳು ಹಣ ಇಟ್ಟುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ, ಶೌಚಾಲಯದ ಒಳಗೆ ಇಷ್ಟು ದೊಡ್ಡ ಮೊತ್ತದ ಹಣ ತಲುಪಿದ್ದು ಹೇಗೆ ಮತ್ತು ಇದಕ್ಕೆ ಒಳಗಿನ ಸಿಬ್ಬಂದಿಯ ಸಹಕಾರವಿದೆಯೇ ಎಂಬ ಬಗ್ಗೆ ಗಂಭೀರ ತನಿಖೆ ಆರಂಭವಾಗಿದೆ.

ಇದನ್ನೂ ಓದಿ:

ತಪಾಸಣೆಯ ವರದಿ ಆಧರಿಸಿ ಅಕ್ರಮ ಎಸಗಿದ ಕೈದಿಗಳು ಹಾಗೂ ಅವರಿಗೆ ನೆರವಾದವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.

Must Read