ಹೊಸದಿಗಂತ ವರದಿ ಬೆಳಗಾವಿ:
ಮಹಾನಗರ ಪಾಲಿಕೆಯ ಪರಿಷತ್ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದ್ದನ್ನೇ ತಪ್ಪಾಗಿ ಬಿಂಬಿಸಿ ನಗರಸೇವಕರ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ನಗರಸೇವಕ ಸಂದೀಪ ಜೀರಗ್ಯಾಳ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.30ರಂದು ನಡೆದ ಪರಿಷತ್ ಸಭೆಯಲ್ಲಿ ಅಧಿಕಾರಿಗಳಿಂದ ಸಮರ್ಪಕ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ಪ್ರಶ್ನೆಗಳನ್ನು ಕೇಳಲಾಗಿದೆ. ಕೆಲ ಅಧಿಕಾರಿಗಳ ವಿರುದ್ಧ ಬಳಸಿದ ಪದಗಳನ್ನು ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗೆ ಅನ್ವಯಿಸುವಂತೆ ಬಿಂಬಿಸಲಾಗುತ್ತಿದೆ. ಸಭೆಯ ದಾಖಲೆಗಳನ್ನು ಪರಿಶೀಲಿಸಿದರೆ ವಾಸ್ತವಾಂಶ ತಿಳಿಯಲಿದೆ ಎಂದರು.
ಪಾಲಿಕೆಯ ಆಡಳಿತದಲ್ಲಿ ಲೋಪ ಕಂಡುಬಂದಾಗ ಅಧಿಕಾರಿಗಳನ್ನು ಪ್ರಶ್ನಿಸುವುದು ನಗರಸೇವಕರ ಹಕ್ಕು ಮತ್ತು ಜವಾಬ್ದಾರಿ. ಸಾರ್ವಜನಿಕರ ಸಮಸ್ಯೆಗಳು ಹಾಗೂ ಹಣದ ಬಳಕೆಯ ಕುರಿತು ಅಧಿಕಾರಿಗಳಿಂದ ಉತ್ತರ ಕೇಳುವುದು ತಪ್ಪೇ ಎಂದು ಪ್ರಶ್ನಿಸಿದರು.
ಉಪ ಆಯುಕ್ತ (ಆಡಳಿತ) ಉದಯಕುಮಾರ ತಳವಾರ ಅವರ ನೇಮಕಾತಿ ಹಾಗೂ ಅರ್ಹತೆ ಕುರಿತು ಪ್ರಶ್ನೆಗಳಿವೆ. ಅವರ ವರ್ಗಾವಣೆ ವಿಚಾರದಲ್ಲಿಯೂ ನ್ಯಾಯಾಲಯದ ಮೊರೆ ಹೋಗಿರುವ ಪರಿಸ್ಥಿತಿ ಇದೆ ಎಂದು ಆರೋಪಿಸಿದರು.
ಇದನ್ನೂ ಓದಿ:
ಪಾಲಿಕೆಯ ವಿವಿಧ ಅಕ್ರಮಗಳ ಕುರಿತು ಸಭೆಯಲ್ಲಿ ಪ್ರಶ್ನಿಸಲಾಗಿದ್ದು, ಪ್ರಮುಖ ಕಡತಗಳು ನಾಪತ್ತೆಯಾದ ಬಗ್ಗೆ ಎಫ್ಐಆರ್ ದಾಖಲಾಗಿದ್ದರೂ ಅವು ಪತ್ತೆಯಾಗಿಲ್ಲ. ಇಂತಹ ವಿಚಾರಗಳನ್ನು ಪ್ರಶ್ನಿಸಿದರೆ ತಪ್ಪೇನು ಎಂದು ಜೀರಗ್ಯಾಳ ಪ್ರಶ್ನಿಸಿದರು.
ನಗರಸೇವಕರು ಒಗ್ಗೂಡಿ ಮೇಯರ್ ಹಾಗೂ ಉಪಮೇಯರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದು, ಅಧಿಕಾರಿಗಳ ಪ್ರತಿಭಟನೆ ಕುರಿತು ಗಮನ ಸೆಳೆಯಲಾಗುವುದು. ಆರೋಪಗಳ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಯತೀಂದ್ರ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.



