ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ತಂಡದ ಅನುಭವಿ ಲೆಗ್ಸ್ಪಿನ್ನರ್ ಯುಜ್ವೇಂದ್ರ ಚಹಲ್ ಪ್ರಥಮ ದರ್ಜೆ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಭಾರತ ಪರ ಟೆಸ್ಟ್ ಪಂದ್ಯ ಆಡುವುದು ತಮ್ಮ ಬಹುಕಾಲದ ಕನಸಾಗಿತ್ತು. ಆದರೆ ಆ ಅವಕಾಶ ಇನ್ನು ಸಾಧ್ಯವಿಲ್ಲ ಎಂಬ ಅರಿವಿನ ಹಿನ್ನೆಲೆಯಲ್ಲಿ ಕೆಂಪು ಚೆಂಡಿನ ಕ್ರಿಕೆಟ್ಗೆ ವಿದಾಯ ಹೇಳುತ್ತಿರುವುದಾಗಿ ಚಹಲ್ ತಿಳಿಸಿದ್ದಾರೆ. ಇದೇ ವೇಳೆ ಏಕದಿನ ಹಾಗೂ ಟಿ20 ಕ್ರಿಕೆಟ್ನಲ್ಲಿ ಭಾರತ ತಂಡಕ್ಕೆ ಮರಳುವ ಪ್ರಯತ್ನ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್ ಕೇವಲ ಆಟವಲ್ಲ
ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ ಚಹಲ್, ಪ್ರಥಮ ದರ್ಜೆ ಕ್ರಿಕೆಟ್ ತಮ್ಮ ಪಾಲಿಗೆ ಕೇವಲ ಮತ್ತೊಂದು ಮಾದರಿಯ ಆಟವಾಗಿರಲಿಲ್ಲ ಎಂದು ಹೇಳಿದ್ದಾರೆ. ದೀರ್ಘ ಕಾಲ ಕ್ರೀಸ್ನಲ್ಲಿ ನಿಂತು ತಾಳ್ಮೆ, ಹೋರಾಟ ಹಾಗೂ ಸ್ಥೈರ್ಯದಿಂದ ಪ್ರತಿ ರನ್ ಮತ್ತು ವಿಕೆಟ್ಗಾಗಿ ಪೈಪೋಟಿ ನಡೆಸುವುದನ್ನು ಈ ಮಾದರಿಯ ಕ್ರಿಕೆಟ್ ಕಲಿಸಿಕೊಟ್ಟಿದೆ ಎಂದು ಅವರು ನೆನಪಿಸಿಕೊಂಡಿದ್ದಾರೆ.
ಚಹಲ್ ಪ್ರಥಮ ದರ್ಜೆ ಕ್ರಿಕೆಟ್ ಜರ್ನಿ
ಚಹಲ್ 2009ರಲ್ಲಿ ಹರಿಯಾಣ ಪರ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಒಟ್ಟು 49 ಪಂದ್ಯಗಳಲ್ಲಿ 148 ವಿಕೆಟ್ಗಳನ್ನು ಪಡೆದಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ಕೌಂಟಿ ಕ್ರಿಕೆಟ್ನಲ್ಲಿ ನಾರ್ಥಾಂಪ್ಟನ್ಶೈರ್ ಪರ ಆಡಿದ್ದ ಅವರು, 2026ರ ಕೌಂಟಿ ಚಾಂಪಿಯನ್ಶಿಪ್ ಡಿವಿಷನ್-2ರಲ್ಲಿ 21 ವಿಕೆಟ್ಗಳನ್ನು ಕಬಳಿಸಿದ್ದರು. ಲಾರ್ಡ್ಸ್ನಲ್ಲಿ ಆಡಿದ ತಮ್ಮ ಕೊನೆಯ ಪ್ರಥಮ ದರ್ಜೆ ಪಂದ್ಯದಲ್ಲೂ ಅವರು ಬೌಲಿಂಗ್ ಪ್ರದರ್ಶನ ನೀಡಿದ್ದರು.
ಇದನ್ನೂ ಓದಿ:
ಭಾರತ ಪರ ಚಹಲ್ 72 ಏಕದಿನ ಹಾಗೂ 80 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆದರೆ 2023ರ ಆಗಸ್ಟ್ ಬಳಿಕ ಅಂತಾರಾಷ್ಟ್ರೀಯ ಟಿ20 ತಂಡದಲ್ಲಿ ಕಾಣಿಸಿಕೊಂಡಿಲ್ಲ. ಪ್ರಸ್ತುತ ದೇಶೀಯ ಹಾಗೂ ಫ್ರಾಂಚೈಸಿ ಟಿ20 ಕ್ರಿಕೆಟ್ನಲ್ಲಿ ಸಕ್ರಿಯರಾಗಿರುವ ಅವರು ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಹೊಂದಿದ್ದಾರೆ.
ಟೆಸ್ಟ್ ಕ್ಯಾಪ್ ಕನಸು ನನಸಾಗದಿದ್ದರೂ, ಅಂತಾರಾಷ್ಟ್ರೀಯ ಕ್ರಿಕೆಟ್ನ ಬಾಗಿಲು ಸಂಪೂರ್ಣ ಮುಚ್ಚಿಲ್ಲ ಎಂಬ ಸಂದೇಶವನ್ನು ಚಹಲ್ ನೀಡಿದ್ದಾರೆ. ಏಕದಿನ ಮತ್ತು ಟಿ20 ತಂಡಕ್ಕೆ ಮರಳಲು ತಮ್ಮಲ್ಲಿರುವ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸುವ ಗುರಿಯೊಂದಿಗೆ ಅವರು ಮುಂದಿನ ಹಾದಿ ಹಿಡಿದಿದ್ದಾರೆ.
https://www.instagram.com/p/Dd-5Cg0kujm/?utm_source=ig_embed&ig_rid=A0k-xExRmXnQj0LGobFmB9o



