October 2, 2026
Friday, October 2, 2026
spot_img

ಚೀನಾ ವಿರುದ್ಧ ಭರ್ಜರಿ ಜಯ: ಹುಟ್ಟುಹಬ್ಬದಂದೇ ಏಷ್ಯನ್ ಗೇಮ್ಸ್‌ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ಭಾರತದ ವನಿತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಪಾನ್‌ನಲ್ಲಿ ಜರುಗುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಹೆಮ್ಮೆಯ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ತಮ್ಮ 29ನೇ ಹುಟ್ಟುಹಬ್ಬದಂದೇ ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ. ಶುಕ್ರವಾರ ನಡೆದ ಮಹಿಳೆಯರ 75 ಕೆಜಿ ವಿಭಾಗದ ರೋಮಾಂಚಕ ಬಾಕ್ಸಿಂಗ್ ಫೈನಲ್ ಪಂದ್ಯದಲ್ಲಿ ಚೀನಾದ ಬಾವೋ ಜಿಯಿ ಅವರನ್ನು 5-0 ಅಂತರದಿಂದ ಸೋಲಿಸುವ ಮಾಡುವ ಮೂಲಕ ಲವ್ಲಿನಾ ಬಂಗಾರದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಈ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಸತತವಾಗಿ ಎರಡು ಬಾರಿ ಫೈನಲ್ ತಲುಪಿದ ಭಾರತದ ಮೊದಲ ಮಹಿಳಾ ಬಾಕ್ಸರ್ ಎಂಬ ಐತಿಹಾಸಿಕ ಕೀರ್ತಿಗೂ ಲವ್ಲಿನಾ ಪಾತ್ರರಾಗಿದ್ದಾರೆ.

ರಿಂಗ್‌ನಲ್ಲಿ ಚೀನಾ ಬಾಕ್ಸರ್‌ ಮಣಿಸಿದ ಅಸ್ಸಾಂ ಧೀರೆ

ಪಂದ್ಯದ ಆರಂಭದಿಂದಲೂ ಚೀನಾದ ಬಾವೋ ಜಿಯಿ ಭಾರಿ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರು. ಆದರೆ ತಾಳ್ಮೆಯಿಂದ ರಿಂಗ್‌ನಲ್ಲಿ ಹೆಜ್ಜೆ ಇಟ್ಟ ಲವ್ಲಿನಾ, ಎದುರಾಳಿಯ ಪಂಚ್‌ಗಳಿಂದ ಜಾಣ್ಮೆಯಿಂದ ತಪ್ಪಿಸಿಕೊಂಡು ಅದ್ಭುತವಾದ ಕೌಂಟರ್-ಪಂಚ್‌ಗಳ ಮೂಲಕ ತಿರುಗೇಟು ನೀಡಿದರು. ಮೊದಲ ಸುತ್ತನ್ನು 3-2 ರಿಂದ ಗೆದ್ದ ಲವ್ಲಿನಾ, ಎರಡನೇ ಸುತ್ತಿನಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ 4-1 ರ ಮುನ್ನಡೆ ಕಾಯ್ದುಕೊಂಡರು. ಕೊನೆಯ ಹಾಗೂ ಮೂರನೇ ಸುತ್ತಿನಲ್ಲೂ ಜಡ್ಜ್‌ಗಳ ಅವಿರೋಧ ತೀರ್ಪಿನೊಂದಿಗೆ 5-0 ರ ಭರ್ಜರಿ ಜಯ ಸಾಧಿಸಿ ಏಷ್ಯನ್ ಗೇಮ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದರು.

ಅಪ್ರತಿಮ ಕ್ರೀಡಾ ಸಾಧನೆ

ಅಸ್ಸಾಂನ ಗೋಲಾಘಾಟ್ ಜಿಲ್ಲೆಯವರಾದ ಲವ್ಲಿನಾ ಬೊರ್ಗೊಹೈನ್ ಅವರ ಖಾತೆಗೆ ಈ ಚಿನ್ನದ ಪದಕ ಮತ್ತೊಂದು ಗರಿ ತಂದಿದೆ. ಇದಕ್ಕೂ ಮುನ್ನ ಅವರು 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ, 2023ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಹಾಗೂ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅವರ ಈ ಅಪ್ರತಿಮ ಕ್ರೀಡಾ ಸಾಧನೆಗಾಗಿ ಈಗಾಗಲೇ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ’ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ:

ಭಾರತದ ಪದಕಗಳ ಸಂಖ್ಯೆ 70ಕ್ಕೆ ಏರಿಕೆ

ಲವ್ಲಿನಾ ಅವರ ಈ ಅದ್ಭುತ ಸ್ವರ್ಣ ಪದಕದೊಂದಿಗೆ ಪ್ರಸ್ತುತ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 70ರ ಗಡಿ ಮುಟ್ಟಿದೆ. ಇದರಲ್ಲಿ 12 ಚಿನ್ನ, 24 ಬೆಳ್ಳಿ ಮತ್ತು 34 ಕಂಚಿನ ಪದಕಗಳು ಒಳಗೊಂಡಿದ್ದು, ಭಾರತೀಯ ಕ್ರೀಡಾಪಟುಗಳು ಜಪಾನ್ ನೆಲದಲ್ಲಿ ದಾಖಲೆಯ ನಾಗಾಲೋಟ ಮುಂದುವರಿಸಿದ್ದಾರೆ.

Must Read