ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಚುನಾವಣಾ ಆಯೋಗದ ವಿರುದ್ಧದ ಪ್ರತಿಭಟನೆ ರಾಜಧಾನಿ ದೆಹಲಿ ಮಾತ್ರವಲ್ಲದೆ ಈಗ ವಾಣಿಜ್ಯ ನಗರಿ ಮುುಂಬೈಗೂ ವ್ಯಾಪಿಸಿದೆ. ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಹಾಗೂ ವಿವಿಧ ನಾಗರಿಕ ಸಂಘಟನೆಗಳ ಕಾರ್ಯಕರ್ತರು ಮುಂಬೈನ ಪ್ರಸಿದ್ಧ ಶಿವಾಜಿ ಪಾರ್ಕ್ನಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಶಿವಾಜಿ ಪಾರ್ಕ್ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
‘ಜ್ಞಾನೇಶ್ ಕುಮಾರ್ ದೇಶದ್ರೋಹಿ’ – ಸಿಜೆಪಿ ಆಕ್ರೋಶ
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಜೆಪಿ ವಕ್ತಾರ ಸೌರವ್ ದಾಸ್ ಮಾಧ್ಯಮಗಳೊಂದಿಗೆ ಮಾತನಾಡಿ, ‘ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ದೇಶಕ್ಕೆ ದ್ರೋಹ ಬಗೆದಿದ್ದಾರೆ, ಅವರನ್ನು ಹುದ್ದೆಯಿಂದ ವಜಾಗೊಳಿಸುವ ನಮ್ಮ ಹೋರಾಟಕ್ಕೆ ಇಡೀ ದೇಶದ ಬೆಂಬಲವಿದೆ. ಈ ಹಿಂದೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೇಶದ ಯುವಸಮೂಹ ಬೀದಿಗಿಳಿದ ಮಾದರಿಯಲ್ಲೇ, ಈಗ ಜ್ಞಾನೇಶ್ ಕುಮಾರ್ ವಿರುದ್ಧ ಮುಂಬೈನ ಯುವ ಪೀಳಿಗೆ ಹಾಗೂ ಸಾರ್ವಜನಿಕರು ದೊಡ್ಡ ಮಟ್ಟದಲ್ಲಿ ಹೋರಾಟಕ್ಕೆ ಧುಮುಕಿದ್ದಾರೆ’ ಎಂದು ಆರೋಪಿಸಿದರು. ತಟಸ್ಥ ಮತದಾನದ ಹಕ್ಕನ್ನು ರಕ್ಷಿಸಲು ಎಲ್ಲಾ ಮುಂಬೈ ಜನತೆ ಈ ಹೋರಾಟದಲ್ಲಿ ಕೈಜೋಡಿಸಬೇಕೆಂದು ಅವರು ಕರೆ ನೀಡಿದರು.
ಸ್ಥಳೀಯ ನಿವಾಸಿಗಳಿಂದ ತೀವ್ರ ವಿರೋಧ
ಇದೇ ವೇಳೆ, ಶಿವಾಜಿ ಪಾರ್ಕ್ ಅನ್ನು ಪ್ರತಿಭಟನಾ ಸ್ಥಳವನ್ನಾಗಿ ಬಳಸಿಕೊಳ್ಳುತ್ತಿರುವುದಕ್ಕೆ ಸ್ಥಳೀಯ ನಿವಾಸಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ನಿವಾಸಿ ಸುನಿಲ್ ಭಗವತ್ ಮಾತನಾಡಿ, ನಾವು ದಿನನಿತ್ಯ ಇಲ್ಲಿ ವಾಯುವಿಹಾರಕ್ಕೆ ಬರುತ್ತೇವೆ, ಆದರೆ ಇತ್ತೀಚೆಗೆ ಇಲ್ಲಿ ಪದೇ ಪದೇ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಸಾಮಾನ್ಯ ಜನರಿಗೆ ಓಡಾಡಲು ತೊಂದರೆಯಾಗುತ್ತಿದೆ. ಪ್ರತಿಭಟನಾಕಾರರಿಗೆ ಸಂವಿಧಾನದ ಅಡಿಯಲ್ಲಿ ಇತರ ನಾಗರಿಕರ ಬಗ್ಗೆ ಯಾವುದೇ ಜವಾಬ್ದಾರಿ ಇಲ್ಲವೇ? ಎಂದು ಪ್ರಶ್ನಿಸಿದರು.
ಮತ್ತೊಬ್ಬ ನಿವಾಸಿ ರವೀಂದ್ರ ಮಾತನಾಡಿ, ಕಳೆದ ಬಾರಿ ಇಲ್ಲಿ ಪ್ರತಿಭಟನೆ ನಡೆದಾಗ ದಾದರ್ ಶಿವಾಜಿ ಪಾರ್ಕ್ ನಿಲ್ದಾಣದವರೆಗೂ ಜನ ಜಂಗುಳಿ ಸೇರಿತ್ತು, ಅಲ್ಲದೆ ಕಿಡಿಗೇಡಿಗಳು ಕುಡಿದು ಮದ್ಯದ ಬಾಟಲಿಗಳನ್ನು ಎಸೆದಿದ್ದರು. ಹತ್ತಿರದಲ್ಲೇ ಎರಡು ಶಾಲೆಗಳು ಮತ್ತು ಆಸ್ಪತ್ರೆ ಇರುವುದರಿಂದ ಸಂಜೆ ವೇಳೆ ಶಾಲಾ ವಾಹನಗಳು ಟ್ರಾಫಿಕ್ನಲ್ಲಿ ಸಿಲುಕಿ ಮಕ್ಕಳು ಪರದಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:
ದೆಹಲಿಯಲ್ಲೂ ತಾರಕಕ್ಕೇರಿದ ಹೋರಾಟ
ಇತ್ತ ಮುಂಬೈನಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ, ಅತ್ತ ದೆಹಲಿಯ ಜಂತರ್ ಮಂತರ್ ಬಳಿ ಪೊಲೀಸರ ನಿಷೇಧಾಜ್ಞೆಯ ನಡುವೆಯೂ ಎಸ್ಎಫ್ಐ (SFI) ಮತ್ತು ಡಿವೈಎಫ್ಐ (DYFI) ಸಂಘಟನೆಗಳ ಸಾವಿರಾರು ಯುವಕರು ಬೃಹತ್ ಧರಣಿ ನಡೆಸಿದರು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಮಾತನಾಡಿ, ಜನರ ಮತಗಳನ್ನು ಅಕ್ರಮವಾಗಿ ಕಡಿತಗೊಳಿಸುವ ಕ್ರಿಮಿನಲ್ ಕೃತ್ಯ ಎಸಗಿರುವ ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಮುಂಬರುವ ದಿನಗಳಲ್ಲಿ ಈ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದ್ದು, ವಿರೋಧ ಪಕ್ಷಗಳ ‘ಇಂಡಿಯಾ’ ಒಕ್ಕೂಟವು ಅ.6 ರಂದು ಬೃಹತ್ ಪ್ರತಿಭಟನಾ ಮೆರವಣಿಗೆಗೆ ಸಿದ್ಧತೆ ನಡೆಸಿದೆ.



