October 2, 2026
Friday, October 2, 2026
spot_img

ಹೋರಾಟ ಬಿಡಲಿಲ್ಲ, ಪದಕ ಕೈತಪ್ಪಲಿಲ್ಲ: ಏಷ್ಯನ್ ಗೇಮ್ಸ್ ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಕುಸ್ತಿಪಟು ಸುಜೀತ್ ಕಲ್ಕಲ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸಾಧ್ಯವೆನಿಸಿದ್ದ ಹಂತದಿಂದ ಅದ್ಭುತವಾಗಿ ಪುಟಿದೆದ್ದ ಭಾರತದ ಕುಸ್ತಿಪಟು ಸುಜೀತ್ ಕಲ್ಕಲ್ ಏಷ್ಯನ್ ಗೇಮ್ಸ್ 2026ರಲ್ಲಿ ದೇಶಕ್ಕೆ ಕುಸ್ತಿ ವಿಭಾಗದ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

ಶುಕ್ರವಾರ ನಡೆದ ಪುರುಷರ ಫ್ರೀಸ್ಟೈಲ್ 65 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ತಜಿಕಿಸ್ತಾನದ ಅಬ್ದುಲ್ಮಜೀದ್ ಕುಡಿಯೆವ್ ವಿರುದ್ಧ 10-9 ಅಂತರದ ರೋಚಕ ಗೆಲುವು ಸಾಧಿಸಿದ 23 ವರ್ಷದ ಸುಜೀತ್, ಪಂದ್ಯದುದ್ದಕ್ಕೂ ಹಿನ್ನಡೆಯಲ್ಲಿದ್ದರೂ ಕೊನೆಯ ಹಂತದಲ್ಲಿ ಸತತ ಎಂಟು ಅಂಕಗಳನ್ನು ಗಳಿಸಿ ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡರು.

ಹೋರಾಟದ ದಿಕ್ಕನ್ನೇ ಬದಲಿಸಿದ ಸುಜೀತ್

ಫೈನಲ್‌ನಲ್ಲಿ ಆರಂಭದಿಂದಲೇ ಕುಡಿಯೆವ್ ಪ್ರಾಬಲ್ಯ ಸಾಧಿಸಿದರು. ಸುಜೀತ್ 2-9 ಅಂಕಗಳಿಂದ ಹಿಂದೆ ಬಿದ್ದಾಗ ಚಿನ್ನದ ಪದಕ ಕೈತಪ್ಪುವ ಸಾಧ್ಯತೆ ಹೆಚ್ಚಾಗಿತ್ತು. ಆದರೆ ಅಂತಿಮ ಕ್ಷಣಗಳಲ್ಲಿ ಭಾರತೀಯ ಕುಸ್ತಿಪಟು ಹೋರಾಟದ ದಿಕ್ಕನ್ನೇ ಬದಲಿಸಿದರು. ಒಂದರ ಹಿಂದೆ ಒಂದರಂತೆ ಅಂಕಗಳನ್ನು ಕಲೆಹಾಕುತ್ತಾ ಮುನ್ನಡೆಯನ್ನು ಕಡಿಮೆ ಮಾಡಿದ ಅವರು, ಕೊನೆಗೆ 10-9 ಮುನ್ನಡೆ ಪಡೆದು ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಇದನ್ನೂ ಓದಿ:

ಫೈನಲ್‌ಗೂ ಮುನ್ನ ಸುಜೀತ್ ಅವರ ಪಯಣವೂ ಗಮನಾರ್ಹವಾಗಿತ್ತು. ಅಫ್ಘಾನಿಸ್ತಾನದ ಸಯ್ಯದ್ ಓಮರ್ ಜಝೈ ವಿರುದ್ಧ ಆರಂಭಿಕ ಹಂತದಲ್ಲಿ ಹಿನ್ನಡೆ ಕಂಡರೂ ನಂತರ ಅದ್ಭುತವಾಗಿ ತಿರುಗೇಟು ನೀಡಿ 13-3 ಅಂತರದಲ್ಲಿ ತಾಂತ್ರಿಕ ಮೇಲುಗೈ ಸಾಧಿಸಿದರು. ಕ್ವಾರ್ಟರ್‌ಫೈನಲ್‌ನಲ್ಲಿ ಇರಾನ್‌ನ ಅಬ್ಬಾಸ್ ಇಬ್ರಾಹಿಮ್‌ಝಾದೆಸವದ್‌ಕುಹಿ ವಿರುದ್ಧವೂ ಯಾವುದೇ ಅಂಕ ಬಿಟ್ಟುಕೊಡದೆ ಮೇಲುಗೈ ಸಾಧಿಸಿ ಗೆದ್ದರು.

ಸೆಮಿಫೈನಲ್‌ನಲ್ಲಿ ಜಪಾನ್‌ ಎದುರಾಳಿ

ಸೆಮಿಫೈನಲ್‌ನಲ್ಲಿ ಸುಜೀತ್‌ಗೆ ಎದುರಾದವರು ಜಪಾನ್‌ನ ಒಲಿಂಪಿಕ್ ಚಾಂಪಿಯನ್ ಕೋಟಾರೊ ಕಿಯೂಕಾ. ಆರಂಭದಲ್ಲಿ 0-2ರಿಂದ ಹಿಂದೆ ಬಿದ್ದರೂ ದ್ವಿತೀಯ ಅವಧಿಯಲ್ಲಿ ತಿರುಗೇಟು ನೀಡಿ 3-3 ಸಮಬಲ ಸಾಧಿಸಿದರು. ಅಂತಿಮವಾಗಿ ಮಾನದಂಡದ ಆಧಾರದ ಮೇಲೆ ಗೆಲುವು ಪಡೆದು ಫೈನಲ್‌ಗೆ ಪ್ರವೇಶಿಸಿದರು.

Must Read