ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶೇಷ ತೀವ್ರ ಪರಿಷ್ಕರಣೆ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸುವ ಕುರಿತ ವಿವಾದ ರಾಜ್ಯದಲ್ಲಿ ಮತ್ತಷ್ಟು ತೀವ್ರಗೊಂಡಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಮುಂದುವರಿಸಿದ್ದು, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಡೆದಿರುವ ಅಕ್ರಮಗಳ ಹಿಂದಿನ ತಂತ್ರಗಳು ಮತ್ತು ಯೋಜನೆಗಳನ್ನು ಹಂತಹಂತವಾಗಿ ಬಯಲಿಗೆಳೆಯುವುದಾಗಿ ಹೇಳಿದ್ದಾರೆ.
ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ಡಿಕೆಶಿ, ಮತದಾರರ ಹೆಸರುಗಳ ಅಳಿಸುವಿಕೆ ಕುರಿತು ತಾವು ಚುನಾವಣಾ ಆಯೋಗಕ್ಕೆ ಏನು ಬೇಕೋ ಅದನ್ನು ಮನದಟ್ಟು ಮಾಡಿದ್ದೇನೆ ಎಂದು ಹೇಳಿದರು. ಚುನಾವಣಾ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಎಂದ ಅವರು, ಒಂದು ಲಕ್ಷವಾಗಲಿ, ಹತ್ತು ಲಕ್ಷವಾಗಲಿ ಅಥವಾ ಇನ್ನಷ್ಟು ಹೆಸರುಗಳಾಗಲಿ, ವಾಸ್ತವಾಂಶಗಳು ಕ್ರಮೇಣ ಹೊರಬರಲಿವೆ ಎಂದು ತಿಳಿಸಿದರು.
ಮತದಾರರ ಹೆಸರು ಅಳಿಸುವ ಪ್ರಯತ್ನ
Form-7 ಅರ್ಜಿಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಅಳಿಸಲು ಪ್ರಯತ್ನಿಸಲಾಗಿದೆ ಎಂಬುದು ಸಿಎಂ ಡಿಕೆಶಿ ಅವರ ಪ್ರಮುಖ ಆರೋಪವಾಗಿದೆ. ಕೆಲವು ಕಡೆಗಳಲ್ಲಿ ಮತದಾರರ ಹೆಸರು, ವಿಳಾಸ ಮತ್ತು EPIC ವಿವರಗಳನ್ನು ಮೊದಲೇ ನಮೂದಿಸಿರುವ ಅರ್ಜಿಗಳು ಸಾಮೂಹಿಕವಾಗಿ ಸಲ್ಲಿಕೆಯಾಗಿವೆ ಎಂಬ ಬಗ್ಗೆಯೂ ಅವರು ತನಿಖೆಗೆ ಒತ್ತಾಯಿಸಿದ್ದಾರೆ. ಈ ಆರೋಪಗಳ ಕುರಿತು ವಿವಿಧ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:
ಸಿಎಂ ಡಿಕೆಶಿ ಅವರು ಚುನಾವಣಾ ಆಯೋಗದ ಕಚೇರಿಯಲ್ಲಿ ನಡೆಸಿದ ಪ್ರತಿಭಟನೆಯನ್ನೂ ಸಮರ್ಥಿಸಿಕೊಂಡಿದ್ದು, ನಾನು ರಸ್ತೆಯಲ್ಲಿ ಕುಳಿತು ಧರಣಿ ಮಾಡಿಲ್ಲ, ನಾನು ಆಫೀಸ್ನಲ್ಲೇ ಇದ್ದೆ. ಅರ್ಹ ಮತದಾರರ ಹಕ್ಕುಗಳನ್ನು ರಕ್ಷಿಸುವುದು ತಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ.
ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತ ಆರೋಪಗಳು ಮತ್ತು ಪ್ರತಿಕ್ರಿಯೆಗಳ ನಡುವೆ, ನಿಜವಾದ ಅರ್ಹ ಮತದಾರರ ಹೆಸರುಗಳಿಗೆ ಯಾವುದೇ ಅನ್ಯಾಯವಾಗದಂತೆ ಪರಿಶೀಲನೆ ನಡೆಸುವುದು ಇದೀಗ ಚುನಾವಣಾ ವ್ಯವಸ್ಥೆಯ ಮುಂದಿರುವ ಪ್ರಮುಖ ಸವಾಲಾಗಿದೆ.



