October 2, 2026
Friday, October 2, 2026
spot_img

927 ಕೋಟಿ ರೂ. ವಂಚನೆ ಆರೋಪ: ಓಝೋನ್ ಅರ್ಬನಾ ಇನ್ಫ್ರಾ ಡೆವಲಪರ್ಸ್ MD ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನೆ ಖರೀದಿದಾರರಿಂದ ನೂರಾರು ಕೋಟಿ ರೂಪಾಯಿ ಸಂಗ್ರಹಿಸಿ ಅಪಾರ್ಟ್‌ಮೆಂಟ್‌ಗಳ ಹಸ್ತಾಂತರ ಮಾಡದೆ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಓಝೋನ್ ಅರ್ಬನಾ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಹಾಗೂ ಪ್ರವರ್ತಕ ಎಸ್. ವಾಸುದೇವನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಸೆಪ್ಟೆಂಬರ್ 30ರಂದು ಬೆಂಗಳೂರಿನ ED ವಲಯ ಕಚೇರಿಯಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಬಂಧನ ನಡೆದಿದ್ದು, ಅಕ್ಟೋಬರ್ 1ರಂದು ಅವರನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಹೆಚ್ಚಿನ ತನಿಖೆಗಾಗಿ 14 ದಿನಗಳ ED ಕಸ್ಟಡಿಗೆ ಒಪ್ಪಿಸಿದೆ.

ED ಹೇಳೋದೇನು?

ED ಪ್ರಕಾರ, ಓಝೋನ್ ಅರ್ಬನಾ ಇನ್ಫ್ರಾ ಡೆವಲಪರ್ಸ್ ಗ್ರಾಹಕರಿಗೆ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ನಿಗದಿತ ಅವಧಿಯಲ್ಲಿ ಹಸ್ತಾಂತರಿಸುವುದಾಗಿ ಭರವಸೆ ನೀಡಿತ್ತು. ನಿರ್ಮಾಣ ಪೂರ್ಣಗೊಳ್ಳುವವರೆಗೆ ಪೂರ್ವ-ನಿರ್ಮಾಣ EMI ಪಾವತಿಸುವುದಾಗಿ ಗ್ರಾಹಕರನ್ನು ಆಕರ್ಷಿಸಲಾಗಿತ್ತು ಎಂದು ತನಿಖಾ ಸಂಸ್ಥೆ ಹೇಳಿದೆ. ಆದರೆ, ಯೋಜನೆಗಳು ಪೂರ್ಣಗೊಳ್ಳದೆ ಮನೆಗಳ ಹಸ್ತಾಂತರವೂ ಆಗಲಿಲ್ಲ ಹಾಗೂ ಗ್ರಾಹಕರು ಪಾವತಿಸಿದ ಹಣವನ್ನು ಹಿಂದಿರುಗಿಸಲಾಗಲಿಲ್ಲ ಎಂಬುದು EDಯ ಆರೋಪ.

ಇದನ್ನೂ ಓದಿ:

CBI ನಿಂದಲೂ ಕೇಸ್

ಈ ಪ್ರಕರಣದಲ್ಲಿ ಒಟ್ಟು 927.22 ಕೋಟಿ ಮೊತ್ತದ ವಂಚನೆ ನಡೆದಿರುವ ಸಾಧ್ಯತೆಯನ್ನು ತನಿಖೆಯಲ್ಲಿ ಗುರುತಿಸಲಾಗಿದೆ ಎಂದು ED ತಿಳಿಸಿದೆ. ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ವಂಚನೆ, ನಂಬಿಕೆದ್ರೋಹ ಹಾಗೂ ಸಂಚು ಆರೋಪಗಳಿಗೆ ಸಂಬಂಧಿಸಿದಂತೆ ಹಲವು FIRಗಳು ದಾಖಲಾಗಿವೆ. ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕ CBI ಕೂಡ ಕಂಪನಿ ಹಾಗೂ ಅದರ ಪ್ರವರ್ತಕರ ವಿರುದ್ಧ ಪ್ರಕರಣ ದಾಖಲಿಸಿತ್ತು.

ಮೂರು ಕಂಪನಿಗಳಲ್ಲೂ ವಾಸುದೇವನ್ ಸಾಮಾನ್ಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವುದು ತನಿಖೆಯಲ್ಲಿ ಗಮನಕ್ಕೆ ಬಂದಿದೆ ಎಂದು ED ಹೇಳಿದೆ. ಇದೀಗ ಅವರ ಬಂಧನದ ಮೂಲಕ ಹಣದ ಮೂಲ, ವರ್ಗಾವಣೆ, ದುರುಪಯೋಗ ಹಾಗೂ ವಿವಿಧ ಕಂಪನಿಗಳು ಮತ್ತು ವ್ಯಕ್ತಿಗಳ ಮೂಲಕ ಹಣದ ಹರಿವು ನಡೆದಿರುವ ಆರೋಪಗಳ ಕುರಿತು ಹೆಚ್ಚಿನ ತನಿಖೆ ನಡೆಯಲಿದೆ.

Must Read