ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯನ್ ಗೇಮ್ಸ್ 2026ರ ಬಾಕ್ಸಿಂಗ್ ರಿಂಗ್ನಲ್ಲಿ ಭಾರತದ ಅಂಕುಶ್ ಪಂಘಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. 80 ಕೆ.ಜಿ. ವಿಭಾಗದ ಫೈನಲ್ನಲ್ಲಿ ದಕ್ಷಿಣ ಕೊರಿಯಾದ ಮಿನ್ಸಾಂಗ್ ಕಿಮ್ ಅವರನ್ನು 5-0 ಅಂತರದಲ್ಲಿ ಮಣಿಸಿದ 21 ವರ್ಷದ ಹರಿಯಾಣದ ಬಾಕ್ಸರ್, ಏಷ್ಯನ್ ಗೇಮ್ಸ್ ಪುರುಷರ ಬಾಕ್ಸಿಂಗ್ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ಫೈನಲ್ನ ಆರಂಭದಿಂದಲೇ ಅಂಕುಶ್ ತಮ್ಮ ವೇಗ ಮತ್ತು ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ಮೊದಲ ಸುತ್ತಿನಲ್ಲಿ 4-1 ಅಂತರದ ತೀರ್ಪು ಪಡೆದ ಅವರು, ಎರಡನೇ ಸುತ್ತಿನಲ್ಲಿ ಎಲ್ಲಾ ಐವರು ತೀರ್ಪುಗಾರರಿಂದಲೂ ಬೆಂಬಲ ಪಡೆದರು. ಅಂತಿಮ ಸುತ್ತಿನಲ್ಲೂ 4-1 ತೀರ್ಪು ತಮ್ಮದಾಗಿಸಿಕೊಂಡ ಅಂಕುಶ್, ಎದುರಾಳಿಗೆ ಯಾವುದೇ ಅವಕಾಶ ನೀಡದೆ ಚಿನ್ನದ ಪದಕವನ್ನು ಖಚಿತಪಡಿಸಿಕೊಂಡರು.
ಸಾಮಾನ್ಯ ಗೆಲುವಿಗಿಂತಲೂ ಮಹತ್ವ
ಫೈನಲ್ಗಿಂತ ಮುನ್ನ ಸೆಮಿಫೈನಲ್ನಲ್ಲಿ ಉಜ್ಬೇಕಿಸ್ತಾನದ ಹಾಲಿ 75 ಕೆ.ಜಿ. ವಿಶ್ವ ಚಾಂಪಿಯನ್ ಫಜ್ಲಿದ್ದೀನ್ ಎರ್ಕಿನ್ಬೋವ್ ಅವರನ್ನು 4-1 ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದ್ದರು. ಹೀಗಾಗಿ ಏಷ್ಯನ್ ಗೇಮ್ಸ್ನಲ್ಲಿನ ಅವರ ಚಿನ್ನದ ಸಾಧನೆ ಸಾಮಾನ್ಯ ಗೆಲುವಿಗಿಂತಲೂ ಮಹತ್ವ ಪಡೆದಿದೆ.
ಇದನ್ನೂ ಓದಿ:
2026ರಲ್ಲೇ ಅಂಕುಶ್ಗೆ ಇದು ಮತ್ತೊಂದು ಪ್ರಮುಖ ಚಿನ್ನವಾಗಿದೆ. ಇದಕ್ಕೂ ಮೊದಲು ಗ್ಲಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪುರುಷರ 80 ಕೆ.ಜಿ. ವಿಭಾಗದಲ್ಲಿ ಅವರು ಚಿನ್ನ ಗೆದ್ದಿದ್ದರು. ಇದೀಗ ಏಷ್ಯನ್ ಗೇಮ್ಸ್ನಲ್ಲೂ ಅದೇ ಯಶಸ್ಸನ್ನು ಪುನರಾವರ್ತಿಸುವ ಮೂಲಕ ಒಂದೇ ವರ್ಷದಲ್ಲಿ ಎರಡು ಪ್ರಮುಖ ಅಂತಾರಾಷ್ಟ್ರೀಯ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಹಿಳಾ ಬಾಕ್ಸಿಂಗ್ ನಲ್ಲೂ ಚಿನ್ನ
ಅಂಕುಶ್ ಅವರ ಗೆಲುವಿನೊಂದಿಗೆ ಭಾರತಕ್ಕೆ ಬಾಕ್ಸಿಂಗ್ನಲ್ಲಿ ಮತ್ತೊಂದು ಚಿನ್ನ ಸೇರ್ಪಡೆಯಾಗಿದೆ. ಇದೇ ದಿನ ಲವ್ಲಿನಾ ಬೊರ್ಗೊಹೈನ್ ಮತ್ತು ಪರ್ವೀನ್ ಹೂಡಾ ಕೂಡ ಚಿನ್ನ ಗೆದ್ದಿದ್ದು, ಭಾರತೀಯ ಬಾಕ್ಸಿಂಗ್ ತಂಡಕ್ಕೆ ಸ್ಮರಣೀಯ ದಿನವಾಗಿ ಪರಿಣಮಿಸಿದೆ.



