October 3, 2026
Saturday, October 3, 2026
spot_img

ಏಷ್ಯನ್ ಗೇಮ್ಸ್: ಬಿಲ್ವಿದ್ಯೆಯಲ್ಲಿ ಇತಿಹಾಸ ಬರೆದ 17 ವರ್ಷದ ಕುಂಕುಮ್ ಮೊಹೊದ್‌ಗೆ ಚಿನ್ನದ ಪದಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026 ರಲ್ಲಿ ಭಾರತದ ಹೆಮ್ಮೆಯ ಬಿಲ್ಲುಗಾರ್ತಿ ಕುಂಕುಮ್ ಮೊಹೊದ್ ಅಪರೂಪದ ಸಾಧನೆ ಮಾಡಿದ್ದಾರೆ. ಶನಿವಾರ ನಡೆದ ಮಹಿಳೆಯರ ವೈಯಕ್ತಿಕ ರಿಕರ್ವ್ ಬಿಲ್ವಿದ್ಯೆ ಸ್ಪರ್ಧೆಯಲ್ಲಿ ಭರ್ಜರಿ ಪ್ರದರ್ಶನ ನೀಡಿದ 17 ವರ್ಷದ ಕುಂಕುಮ್, ದಕ್ಷಿಣ ಕೊರಿಯಾದ ಓ ಯೆಜಿನ್ ಅವರನ್ನು ರೋಮಾಂಚಕ ಶೂಟ್-ಆಫ್‌ನಲ್ಲಿ ಮಣಿಸಿ ಭಾರತಕ್ಕೆ ಮೊದಲ ಐತಿಹಾಸಿಕ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಮಹಿಳೆಯರ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಕೊನೆಯ ಸೆಕೆಂಡ್‌ವರೆಗೂ ಮುಂದುವರಿದ ರೋಮಾಂಚನ

ಐದು ಸೆಟ್‌ಗಳ ತೀವ್ರ ಜಿದ್ದಾಜಿದ್ದಿನ ಹೋರಾಟದ ಬಳಿಕ ಇಬ್ಬರೂ ಆಟಗಾರ್ತಿಯರು 5-5 ಅಂಕಗಳೊಂದಿಗೆ ಸಮಬಲ ಸಾಧಿಸಿದ್ದರು. ಇದರಿಂದಾಗಿ ವಿಜೇತರನ್ನು ನಿರ್ಧರಿಸಲು ಅಂತಿಮವಾಗಿ ಒಂದೇ ಒಂದು ಬಾಣದ ‘ಶೂಟ್-ಆಫ್’ ಮೊರೆ ಹೋಗಬೇಕಾಯಿತು. ಒತ್ತಡದ ಕ್ಷಣದಲ್ಲಿ ದಕ್ಷಿಣ ಕೊರಿಯಾದ ಓ ಯೆಜಿನ್ ಕೇವಲ 8 ಅಂಕ ಗಳಿಸಲಷ್ಟೇ ಶಕ್ತರಾದರು. ಆದರೆ, ಭಾರತದ ತರುಣಿ ಕುಮ್‌ಕುಮ್, ಸರಿಯಾಗಿ 10ರ ರಿಂಗ್‌ಗೆ ಬಾಣ ನಾಟಿಸುವ ಮೂಲಕ ಇಡೀ ಕ್ರೀಡಾಂಗಣವೇ ಎದ್ದು ನಿಂತು ಚಪ್ಪಾಳೆ ತಟ್ಟುವಂತೆ ಚಿನ್ನದ ಪದಕಕ್ಕೆ ಮುತ್ತಿಟ್ಟರು.

ಪದಕಗಳ ಬೇಟೆಯಾಡಿದ ಕುಂಕುಮ್

ಕುಂಕುಮ್ ಅವರಿಗೆ ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಕೇವಲ ವೈಯಕ್ತಿಕ ವಿಭಾಗ ಮಾತ್ರವಲ್ಲದೆ, ಇದಕ್ಕೂ ಮುನ್ನ ನಡೆದ ಮಹಿಳಾ ರಿಕರ್ವ್ ತಂಡದ ಸ್ಪರ್ಧೆಯಲ್ಲಿ ಅಂಕಿತಾ ಭಕತ್ ಮತ್ತು ಕೀರ್ತಿ ಶರ್ಮಾ ಅವರೊಂದಿಗೆ ಸೇರಿ ದಕ್ಷಿಣ ಕೊರಿಯಾವನ್ನು 5-3 ರಿಂದ ಸೋಲಿಸಿ ಚಿನ್ನದ ಪದಕ ಜಯಿಸಿದ್ದರು. ಅಲ್ಲದೆ, ಮಿಶ್ರ ತಂಡದ ಸ್ಪರ್ಧೆಯಲ್ಲಿ ಧೀರಾಜ್ ಬೊಮ್ಮದೇವರ ಅವರೊಂದಿಗೆ ಜೋಡಿಯಾಗಿ ಬೆಳ್ಳಿ ಪದಕವನ್ನೂ ಮುಡಿಗೇರಿಸಿಕೊಂಡಿದ್ದರು.

ಕ್ವಾರ್ಟರ್ ಫೈನಲ್‌ನಲ್ಲಿ ಒಲಿಂಪಿಕ್ ಚಾಂಪಿಯನ್‌ಗೆ ಶಾಕ್

ಚಿನ್ನದ ಹಾದಿಯಲ್ಲಿ ಕುಮ್‌ಕುಮ್ ಅವರ ಪ್ರಯಾಣ ಸುಲಭವಾಗಿರಲಿಲ್ಲ. ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ವಿಶ್ವ ಹಾಗೂ ಒಲಿಂಪಿಕ್ ಚಾಂಪಿಯನ್ ಕಾಂಗ್ ಚೇಯಂಗ್ ಅವರನ್ನು 6-4 ರಿಂದ ಮಣಿಸಿ ಅಚ್ಚರಿ ಮೂಡಿಸಿದ್ದರು. ತದನಂತರ ಸೆಮಿಫೈನಲ್‌ನಲ್ಲಿ ಚೀನಾದ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತೆ ಝು ಜಿಂಗ್ಯಿ ಅವರನ್ನು 6-2 ರಿಂದ ಸೋಲಿಸಿ ಫೈನಲ್ ತಲುಪಿದ್ದರು.

ಭಾರತದ ಪದಕಗಳ ಪಟ್ಟಿ 77ಕ್ಕೆ ಏರಿಕೆ

ಕುಂಕುಮ್ ಅವರ ಈ ಅದ್ಭುತ ಚಿನ್ನದ ಪದಕದೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 77ಕ್ಕೆ ತಲುಪಿದೆ. ಇದರಲ್ಲಿ 17 ಚಿನ್ನ, 25 ಬೆಳ್ಳಿ ಹಾಗೂ 35 ಕಂಚ್ ಪದಕಗಳು ಸೇರಿವೆ.

Must Read