October 3, 2026
Saturday, October 3, 2026
spot_img

ಏಷ್ಯನ್ ಗೇಮ್ಸ್‌ನಲ್ಲಿ ಮೈಸೂರಿನ ಪ್ರಣವಿ ಅರಸ್ ಐತಿಹಾಸಿಕ ಸಾಧನೆ; ಗಾಲ್ಫ್‌ನಲ್ಲಿ ಭಾರತಕ್ಕೆ ಮೊದಲ ಸ್ವರ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026 ರಲ್ಲಿ ಭಾರತದ ಗಾಲ್ಫ್ ತಾರೆ ಪ್ರಣವಿ ಅರಸ್ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಶನಿವಾರ ನಡೆದ ಮಹಿಳೆಯರ ವೈಯಕ್ತಿಕ ಗಾಲ್ಫ್ ಸ್ಪರ್ಧೆಯಲ್ಲಿ ರೋಮಾಂಚಕ ಪ್ರದರ್ಶನ ನೀಡಿದ ಮೈಸೂರಿನ 23 ವರ್ಷದ ಪ್ರಣವಿ, ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳಾ ಗಾಲ್ಫರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರ ಜೊತೆಗೆ ಮಹಿಳಾ ತಂಡ ವಿಭಾಗದಲ್ಲೂ ಭಾರತಕ್ಕೆ ಬೆಳ್ಳಿಯ ಪದಕ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ರೋಚಕ ಫೈನಲ್ ರೌಂಡ್

ಅಂತಿಮ ಸುತ್ತಿನಲ್ಲಿ ಜಿದ್ದಾಜಿದ್ದಿನ ಹೋರಾಟ ಎದುರಿಸಿದ ಪ್ರಣವಿ, ಒಟ್ಟು 15-ಅಂಡರ್ 265 ಸ್ಕೋರ್ ಮಾಡುವ ಮೂಲಕ ಚೀನಾದ ಯಿನ್ ರುವೋನಿಂಗ್ ಮತ್ತು ಸಿಂಗಾಪುರದ ಶಾನನ್ ಟಾನ್ ಅವರನ್ನು ಸೋಲಿಸಿ ಅಗ್ರಸ್ಥಾನ ಕಾಯ್ದುಕೊಂಡರು. ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ, ತದನಂತರ ಅದ್ಭುತವಾಗಿ ಪುಟಿದೆಳುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು.

24 ವರ್ಷಗಳ ಬಳಿಕ ಒಲಿದ ಗಾಲ್ಫ್ ಸ್ವರ್ಣ

ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತಕ್ಕೆ ಒಲಿದ ಮೊದಲ ಮಹಿಳಾ ವೈಯಕ್ತಿಕ ಗಾಲ್ಫ್ ಚಿನ್ನದ ಪದಕ ಇದಾಗಿದೆ. ಇನ್ನು ಒಟ್ಟಾರೆ ಗಾಲ್ಫ್ ಇತಿಹಾಸದಲ್ಲಿ 2002 ರಲ್ಲಿ ಶಿವ್ ಕಪೂರ್ ಅವರು ಪುರುಷರ ವಿಭಾಗದಲ್ಲಿ ಚಿನ್ನ ಗೆದ್ದ ನಂತರ ಭಾರತಕ್ಕೆ ಸಿಕ್ಕ ಮೊದಲ ಸ್ವರ್ಣ ಪದಕ ಎಂಬ ಕೀರ್ತಿಗೂ ಇದು ಪಾತ್ರವಾಗಿದೆ.

ತಂಡ ವಿಭಾಗದಲ್ಲೂ ಭಾರತಕ್ಕೆ ಬೆಳ್ಳಿಯ ಸಿಂಚನ

ವೈಯಕ್ತಿಕ ಚಿನ್ನದ ಜೊತೆಗೆ, ಪ್ರಣವಿ ಅರಸ್ ಅವರು ಗಾಲ್ಫರ್‌ಗಳಾದ ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ ಅವರೊಂದಿಗೆ ಕೈಜೋಡಿಸಿ ಮಹಿಳಾ ತಂಡ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ. ಈ ಜಂಟಿ ಹೋರಾಟದಲ್ಲಿ ಭಾರತ ತಂಡವು ಒಟ್ಟು 14-ಅಂಡರ್ 546 ಸ್ಕೋರ್‌ನೊಂದಿಗೆ ಎರಡನೇ ಸ್ಥಾನ ಪಡೆಯಿತು. ಈ ವಿಭಾಗದಲ್ಲಿ ಚೀನಾ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತು.

ಇದನ್ನೂ ಓದಿ:

ಭಾರತದ ಪದಕಗಳ ಬೇಟೆ 79ಕ್ಕೆ ಏರಿಕೆ

ಏಷ್ಯನ್ ಗೇಮ್ಸ್‌ನ ಕೊನೆಯ ದಿನಗಳಲ್ಲಿ ಭಾರತೀಯ ಕ್ರೀಡಾಪಟುಗಳು ಪದಕಗಳ ಸುರಿಮಳೆಗರೆಯುತ್ತಿದ್ದಾರೆ. ಬಿಲ್ವಿದ್ಯೆಯಲ್ಲಿ 17 ವರ್ಷದ ಕುಂಕುಮ್ ಮೊಹೊದ್‌ ಚಿನ್ನ ಗೆದ್ದ ಬೆನ್ನಲ್ಲೇ ಪ್ರಣವಿ ಗಾಲ್ಫ್‌ನಲ್ಲಿ ಡಬಲ್ ಪದಕದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಭಾರತದ ಒಟ್ಟು ಪದಕಗಳ ಪಟ್ಟಿ 79ಕ್ಕೆ ತಲುಪಿದ್ದು, ಇದರಲ್ಲಿ 18 ಚಿನ್ನ, 26 ಬೆಳ್ಳಿ ಹಾಗೂ 35 ಕಂಚ್ ಪದಕಗಳು ಸೇರಿವೆ.

Must Read