October 3, 2026
Saturday, October 3, 2026
spot_img

ದೇಶಾದ್ಯಂತದ ಪ್ರತಿಭಟನೆಗಳನ್ನು ಒಗ್ಗೂಡಿಸಲು ‘ಸತ್ಯಾಗ್ರಹ’ ಡಿಜಿಟಲ್ ವೇದಿಕೆ ಆರಂಭಿಸಿದ ರಾಹುಲ್ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಶನಿವಾರ ದೇಶಾದ್ಯಂತ ನಡೆಯುತ್ತಿರುವ ವಿವಿಧ ಜನಪರ ಹೋರಾಟಗಳು ಮತ್ತು ಪ್ರತಿಭಟನೆಗಳನ್ನು ಒಂದೇ ಸೂರಿನಡಿ ತರಲು ‘ಸತ್ಯಾಗ್ರಹ’ ಎಂಬ ನೂತನ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಬಿಡುಗಡೆ ಮಾಡಿದ್ದಾರೆ. ಸಾರ್ವಜನಿಕರು ತಮ್ಮ ಸುತ್ತಮುತ್ತ ನಡೆಯುತ್ತಿರುವ ಅನ್ಯಾಯಗಳ ವಿರುದ್ಧದ ಹೋರಾಟದ ಕಥೆಗಳು ಹಾಗೂ ಪ್ರತಿಭಟನೆಗಳ ವಿವರಗಳನ್ನು ಈ ಜಾಲತಾಣದಲ್ಲಿ ಮುಕ್ತವಾಗಿ ಹಂಚಿಕೊಳ್ಳುವಂತೆ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ.

ಒಬ್ಬಂಟಿ ಹೋರಾಟಕ್ಕೆ ಸಿಗಲಿದೆ ಜಾಗತಿಕ ಬೆಂಬಲ

ಸಾಮಾಜಿಕ ಜಾಲತಾಣವಾದ ‘ಎಕ್ಸ್’ ನಲ್ಲಿ ಈ ಬಗ್ಗೆ ಹಂಚಿಕೊಂಡಿರುವ ರಾಹುಲ್ ಗಾಂಧಿ, ‘ದೇಶದ ಮೂಲೆ ಮೂಲೆಗಳಲ್ಲಿ ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ, ಆದರೆ ದುರದೃಷ್ಟವಶಾತ್ ಅವರು ಹೆಚ್ಚಾಗಿ ಒಬ್ಬಂಟಿಯಾಗಿದ್ದಾರೆ. ವಿದ್ಯಾರ್ಥಿಗಳು, ರೈತರು, ಆದಿವಾಸಿಗಳು, ದಲಿತರು ಹಾಗೂ ಮಹಿಳೆಯರ ಪ್ರತಿಯೊಂದು ಹೋರಾಟಕ್ಕೂ ತನ್ನದೇ ಆದ ಕಥೆಯಿದೆ. ಆದರೆ ಒಬ್ಬಂಟಿಯಾಗಿ ಎತ್ತುವ ಧ್ವನಿಯನ್ನು ವ್ಯವಸ್ಥೆಯು ಸುಲಭವಾಗಿ ಹತ್ತಿಕ್ಕುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಸ್ಮರಿಸಿದ ಅವರು, ಸತ್ಯದ ಪರವಾಗಿ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲುವುದೇ ಅನ್ಯಾಯದ ವಿರುದ್ಧದ ಅತಿ ದೊಡ್ಡ ಅಸ್ತ್ರ ಎಂದಿದ್ದಾರೆ.

‘ಸತ್ಯಾಗ್ರಹ’ ಡಿಜಿಟಲ್ ವೇದಿಕೆಯ ವಿಶೇಷತೆಗಳೇನು?

ಪ್ರತಿಭಟನಾಕಾರರು ತಮ್ಮ ಹೋರಾಟದ ವಿವರಗಳನ್ನು ದಾಖಲಿಸಿದ ತಕ್ಷಣ, ಅದು ದೇಶದ ಡಿಜಿಟಲ್ ನಕ್ಷೆಯ ಮೇಲೆ ಮೂಡುತ್ತದೆ. ನಿಮ್ಮಂತೆಯೇ ದೇಶದ ಇನ್ಯಾವ ಭಾಗದಲ್ಲಿ ಯಾರು ಅದೇ ವಿಷಯಕ್ಕಾಗಿ ಹೋರಾಡುತ್ತಿದ್ದಾರೆ ಎಂಬುದನ್ನು ಈ ನಕ್ಷೆಯ ಮೂಲಕ ಸುಲಭವಾಗಿ ಪತ್ತೆಹಚ್ಚಬಹುದು. ಬೆಲೆ ಏರಿಕೆ, ರೈತರ ಸಮಸ್ಯೆ, ಮಹಿಳಾ ಸುರಕ್ಷತೆ ಹೀಗೆ ಸಣ್ಣ ಅಥವಾ ದೊಡ್ಡ ಮಟ್ಟದ ಯಾವುದೇ ಪ್ರತಿಭಟನೆಯಾಗಿದ್ದರೂ ಜನರು ತಮ್ಮ ಗುಂಪಿನ ಹೆಸರಿನೊಂದಿಗೆ ಇಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ನೇರ ಬೆಂಬಲವನ್ನು ಕೋರಬಹುದು.

ಇದನ್ನೂ ಓದಿ:

‘ಬೀದಿಯಿಂದ ಸಂಸತ್ತಿನವರೆಗೆ ನಿಮ್ಮ ಪರ ಧ್ವನಿಯಾಗುವೆ’

ವಿಡಿಯೋ ಸಂದೇಶದ ಮೂಲಕ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, ‘ವಿರೋಧ ಪಕ್ಷದ ನಾಯಕನಾಗಿ ನಿಮ್ಮ ಹೋರಾಟಗಳಿಗೆ ಧ್ವನಿಯಾಗುವುದು ನನ್ನ ಜವಾಬ್ದಾರಿ. ನೀವು ಈ ವೇದಿಕೆಯಲ್ಲಿ ನಿಮ್ಮ ಕಥೆ ಹಂಚಿಕೊಂಡರೆ, ನಿಮ್ಮ ಪರವಾಗಿ ನಾನು ಸಂಸತ್ತಿನಲ್ಲಿ ಧ್ವನಿ ಎತ್ತಲಿದ್ದೇನೆ, ಬೀದಿಗಿಳಿದು ಹೋರಾಡಲಿದ್ದೇನೆ ಮತ್ತು ಅಗತ್ಯ ಬಿದ್ದಲ್ಲಿ ಅಧಿಕಾರಿಗಳಿಗೆ ಪತ್ರ ಬರೆದು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದ್ದೇನೆ’ ಎಂದು ಭರವಸೆ ನೀಡಿದ್ದಾರೆ.

Must Read