October 3, 2026
Saturday, October 3, 2026
spot_img

ಆಂಧ್ರಪ್ರದೇಶದ ಫಾರ್ಮಾ ಕಂಪನಿಯಲ್ಲಿ ಬಾಯ್ಲರ್ ಸ್ಫೋಟ: ಐವರು ಸಾ*ವು, 10 ಜನರಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ಶನಿವಾರ ಭೀಕರ ಘಟನೆವೊಂದು ಸಂಭವಿಸಿದೆ. ಇಲ್ಲಿನ ಖಾಸಗಿ ಔಷಧಿ ತಯಾರಿಕಾ (ಫಾರ್ಮಾ) ಕಂಪನಿಯೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಐವರು ಕಾರ್ಮಿಕರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ 10 ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಶ್ರೀ ಸಿಟಿಯಲ್ಲಿ ಆತಂಕದ ವಾತಾವರಣ

ತಿರುಪತಿ ಜಿಲ್ಲೆಯ ಪ್ರಸಿದ್ಧ ಕೈಗಾರಿಕಾ ವಲಯವಾದ ಶ್ರೀ ಸಿಟಿಯಲ್ಲಿರುವ ‘ಟಿಐಎಲ್ ಹೆಲ್ತ್‌ಕೇರ್’ ಫಾರ್ಮಾ ಕಂಪನಿಯಲ್ಲಿ ಈ ದುರಂತ ನಡೆದಿದೆ. ಸ್ಫೋಟದ ಭೀಕರತೆ ಎಷ್ಟಿತ್ತೆಂದರೆ ಇಡೀ ಕೈಗಾರಿಕಾ ಪ್ರದೇಶದಲ್ಲಿ ಕೆಲಕಾಲ ಭಾರೀ ಆತಂಕ ಉಂಟಾಗಿತ್ತು. ಘಟನೆ ಸಂಭವಿಸುತ್ತಿದ್ದಂತೆ ಅಲರ್ಟ್ ಆದ ತುರ್ತು ರಕ್ಷಣಾ ತಂಡಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಗಾಯಗೊಂಡ ಕಾರ್ಮಿಕರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ರವಾನಿಸಿ ತುರ್ತು ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸಮಗ್ರ ತನಿಖೆ ಆಗ್ರಹ

ತಿರುಪತಿ ಲೋಕಸಭಾ ಕ್ಷೇತ್ರದ ಸಂಸದರಾದ ಮದ್ದಿಲ ಗುರುಮೂರ್ತಿ ಅವರು ಈ ಅವಘಡದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಈ ಘಟನೆಯ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಈ ಸ್ಫೋಟಕ್ಕೆ ನಿಖರ ಕಾರಣ ಏನೆಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:

ಸಚಿವ ನಾರಾ ಲೋಕೇಶ್ ಕಂಬನಿ

ಆಂಧ್ರಪ್ರದೇಶದ ಶಿಕ್ಷಣ ಮತ್ತು ಐಟಿ ಸಚಿವ ನಾರಾ ಲೋಕೇಶ್ ಅವರು ಸಹ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಲು ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಸಂಕಷ್ಟದ ಈ ಸಮಯದಲ್ಲಿ ಆಂಧ್ರ ಸರ್ಕಾರವು ನೊಂದ ಕುಟುಂಬಗಳ ಬೆನ್ನಿಗೆ ನಿಲ್ಲಲಿದ್ದು, ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಬಾಯ್ಲರ್ ಸ್ಫೋಟಗೊಳ್ಳಲು ತಾಂತ್ರಿಕ ದೋಷ ಕಾರಣವೇ ಅಥವಾ ನಿರ್ಲಕ್ಷ್ಯವೇ ಎಂಬ ಬಗ್ಗೆ ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.

Must Read