ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026 ರ ಕ್ರಿಕೆಟ್ ಅಂಗಳದಲ್ಲಿ ಭಾರತದ ಪುರುಷರ ತಂಡವು ಇತಿಹಾಸ ನಿರ್ಮಿಸಿದೆ. ಶನಿವಾರ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 19 ರನ್ಗಳ ಅಂತರದಿಂದ ಮಣಿಸಿದ ಭಾರತ, ಬಂಗಾರದ ಪದಕವನ್ನು ಮುಡಿಗೇರಿಸಿಕೊಂಡಿದೆ. ಈ ಗೆಲುವಿನೊಂದಿಗೆ ಭಾರತೀಯ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆಯಲಾಗಿದ್ದು, ಈಗಾಗಲೇ ಮಹಿಳಾ ತಂಡವು ಚಿನ್ನ ಗೆದ್ದಿರುವುದರಿಂದ ಏಷ್ಯನ್ ಗೇಮ್ಸ್ ಕ್ರಿಕೆಟ್ನಲ್ಲಿ ಭಾರತಕ್ಕೆ ‘ಡಬಲ್ ಗೋಲ್ಡ್’ ಲಭಿಸಿದಂತಾಗಿದೆ.
ಅಭಿಷೇಕ್, ತಿಲಕ್ ಸಿಡಿಲಬ್ಬರದ ಬ್ಯಾಟಿಂಗ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ಶರ್ಮಾ ಬಿರುಸಿನ ಆರಂಭ ನೀಡಿದರು. ಪಾಕ್ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಅಭಿಷೇಕ್ ಶರ್ಮಾ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಒಟ್ಟು 28 ಎಸೆತಗಳನ್ನು ಎದುರಿಸಿದ ಅವರು 7 ಭರ್ಜರಿ ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ 61 ರನ್ ಚಚ್ಚಿ ಔಟಾದರು.
ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ (2) ಹಾಗೂ ಇಶಾನ್ ಕಿಶನ್ (20) ಬೇಗನೆ ವಿಕೆಟ್ ಒಪ್ಪಿಸಿದರೂ, ಜವಾಬ್ದಾರಿಯುತ ಆಟವಾಡಿದ ನಾಯಕ ಶ್ರೇಯಸ್ ಅಯ್ಯರ್ 21 ರನ್ ಗಳಿಸಿದರು. ಅಂತಿಮ ಓವರ್ಗಳಲ್ಲಿ ಶಿವಂ ದುಬೆ (27 ರನ್, 15 ಎಸೆತ) ಹಾಗೂ ತಿಲಕ್ ವರ್ಮಾ ಅಬ್ಬರಿಸಿದರು. ಕೇವಲ 21 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ ತಿಲಕ್ ವರ್ಮಾ, 51 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 211 ರನ್ಗಳ ಬೃಹತ್ ಮೊತ್ತ ಗಳಿಸಿತು.
ಭಾರತದ ಸ್ಪಿನ್ ಜಾಲಕ್ಕೆ ಪಾಕ್ ತತ್ತರ
212 ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ಭಾರತದ ಸ್ಪಿನ್ನರ್ಗಳು ಆರಂಭಿಕ ಆಘಾತ ನೀಡಿದರು. ವಾಷಿಂಗ್ಟನ್ ಸುಂದರ್ ಹಾಗೂ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಕಿತ್ತು ಪಾಕ್ ತಂಡವನ್ನು 39 ರನ್ಗಳಿಗೆ 3 ವಿಕೆಟ್ ಉರುಳಿಸಿ ಸಂಕಷ್ಟಕ್ಕೆ ತಳ್ಳಿದರು. ಈ ಹಂತದಲ್ಲಿ ಒಂದಾದ ಸೈಮ್ ಅಯೂಬ್ (29) ಮತ್ತು ಹಸನ್ ನವಾಜ್ ಭಾರತದ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಇವರಿಬ್ಬರು 87 ರನ್ಗಳ ಜೊತೆಯಾಟವಾಡಿ ಭಾರತಕ್ಕೆ ಆತಂಕ ಮೂಡಿಸಿದರು.
ಆದರೆ ಶಿವಂ ದುಬೆ ಈ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. ಒಂದು ಕಡೆ ವಿಕೆಟ್ಗಳು ಉರುಳುತ್ತಿದ್ದರೂ ಪಾಕಿಸ್ತಾನದ ಹಸನ್ ನವಾಜ್ ಏಕಾಂಗಿ ಹೋರಾಟ ನಡೆಸಿ ಕೇವಲ 51 ಎಸೆತಗಳಲ್ಲಿ 5 ಬೌಂಡರಿ ಹಾಗೂ 7 ಸಿಕ್ಸರ್ಗಳೊಂದಿಗೆ 96 ರನ್ ಚಚ್ಚಿದರು. ಆದರೆ ಅಂತಿಮ ಓವರ್ಗಳಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ಜಸ್ಪ್ರಿತ್ ಬುಮ್ರಾ ಪಾಕಿಸ್ತಾನವನ್ನು 20 ಓವರ್ಗಳಲ್ಲಿ 192 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಭಾರತದ ಪರ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ತಲಾ 2 ವಿಕೆಟ್ ಪಡೆದು ಜಯದ ರೂವಾರಿಯಾದರು.
ಇದನ್ನೂ ಓದಿ:
ಭಾರತದ ಪದಕಗಳ ಸಂಖ್ಯೆ 81ಕ್ಕೆ ಏರಿಕೆ
ಪುರುಷರ ಕ್ರಿಕೆಟ್ ತಂಡದ ಈ ಬಂಗಾರದ ಪದಕದೊಂದಿಗೆ ಪ್ರಸ್ತುತ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 81ಕ್ಕೆ ತಲುಪಿದೆ. ಇದರಲ್ಲಿ 19 ಚಿನ್ನ, 26 ಬೆಳ್ಳಿ ಹಾಗೂ 36 ಕಂಚಿನ ಪದಕಗಳು ಸೇರಿವೆ. ಇದಕ್ಕೂ ಮುನ್ನ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತದ ಮಹಿಳಾ ಕ್ರಿಕೆಟ್ ತಂಡವು ಶ್ರೀಲಂಕಾವನ್ನು 147 ರನ್ಗಳಿಂದ ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡಿತ್ತು.



