ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಪ್ರತಿಯೊಂದು ಬೀದಿ, ಉದ್ಯಾನ, ಮೈದಾನ ಹಾಗೂ ಪ್ರಮುಖ ಸಾರ್ವಜನಿಕ ಸ್ಥಳಗಳು ಡಿಸೆಂಬರ್ನಲ್ಲಿ ಹಬ್ಬದ ಸೊಬಗಿನಿಂದ ಕಂಗೊಳಿಸಲಿದೆ.
ಹೌದು! ನಗರದ ವೈವಿಧ್ಯಮಯ ಕಲೆ, ಸಂಸ್ಕೃತಿ, ಆಹಾರ ಮತ್ತು ಸ್ಥಳೀಯ ಪರಂಪರೆಯನ್ನು ಒಂದೇ ವೇದಿಕೆಗೆ ತರುವ ಉದ್ದೇಶದಿಂದ ಡಿಸೆಂಬರ್ 4ರಿಂದ 13ರವರೆಗೆ 10 ದಿನಗಳ ‘ಬೆಂಗಳೂರು ಜಾತ್ರೆ’ ಆಯೋಜಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಒಂದೇ ಸ್ಥಳದಲ್ಲಿ ಕಾರ್ಯಕ್ರಮ ನಡೆಸುವ ಬದಲು ಇಡೀ ನಗರವನ್ನೇ ಉತ್ಸವದ ವೇದಿಕೆಯನ್ನಾಗಿ ಮಾಡುವ ಚಿಂತನೆಯೂ ನಡೆದಿದೆ.
ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ, ‘ವೈವಿಧ್ಯತೆಯಲ್ಲಿ ಏಕತೆ, ಸಂಭ್ರಮದಲ್ಲಿ ಬೆಂಗಳೂರು’ ಎಂಬ ಆಶಯದೊಂದಿಗೆ ರೂಪಿಸಲಾಗುತ್ತಿರುವ ಜಾತ್ರೆಯಲ್ಲಿ ಕಲೆ, ಸಂಸ್ಕೃತಿ, ಸಂಗೀತ, ನೃತ್ಯ, ಆಹಾರ, ಪ್ರವಾಸೋದ್ಯಮ ಹಾಗೂ ಸೃಜನಶೀಲ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವ ಯೋಜನೆ ಇದೆ ಎಂದರು. ಸರ್ಕಾರವೇ ಎಲ್ಲ ಕಾರ್ಯಕ್ರಮಗಳನ್ನು ನಡೆಸುವ ಬದಲು ವಿವಿಧ ಸಂಸ್ಥೆಗಳು ಒಟ್ಟುಗೂಡಿಸಿ ಸಮನ್ವಯವಾಗಿ ಕಾರ್ಯನಿರ್ವಹಿಸುವ ಮಾದರಿಯನ್ನು ಪರಿಗಣಿಸಲಾಗಿದೆ ಎಂದು ಹೇಳಿದರು.
ಹಲವು ಇಲಾಖೆಗಳಿಂದ ಹಲವು ಕಾರ್ಯಕ್ರಮ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕದ ಜನಪದ ಹಾಗೂ ಸಾಂಪ್ರದಾಯಿಕ ಕಲೆಗಳನ್ನು ಪರಿಚಯಿಸುವ ಕಾರ್ಯಕ್ರಮಗಳನ್ನು ನಡೆಸುವ ನಿರೀಕ್ಷೆಯಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ಕೆಎಸ್ಟಿಡಿಸಿ ಮೂಲಕ ರಾಜ್ಯದ ಆಹಾರ, ಪ್ರವಾಸಿ ತಾಣಗಳು ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲೂ ಸ್ಥಳೀಯ ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರಸ್ತಾವನೆ ಇದೆ.
ಇದನ್ನೂ ಓದಿ:
ಮೆಟ್ರೋ ನಿಲ್ದಾಣಗಳ ಕಾನ್ಕೋರ್ಸ್ಗಳಲ್ಲಿ ಕಲಾ ಕಾರ್ಯಕ್ರಮಗಳು, ಬಿಎಂಟಿಸಿ ಬಸ್ಗಳಲ್ಲಿ ಜಾತ್ರೆಯ ಬ್ರ್ಯಾಂಡಿಂಗ್ ಹಾಗೂ ವಿವಿಧ ಸಾರ್ವಜನಿಕ ಮೂಲಸೌಕರ್ಯ ಸ್ಥಳಗಳನ್ನು ಸೃಜನಾತ್ಮಕ ಕಾರ್ಯಕ್ರಮಗಳಿಗೆ ಬಳಸುವ ಸಾಧ್ಯತೆಯೂ ಇದೆ. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಯೋಜನೆ ರೂಪಿಸಲಾಗಿದೆ.
ಯಾವೆಲ್ಲ ಸಂಸ್ಥೆಗಳು ಪಾಲು ಪಡೆಯಲಿವೆ?
ಐಐಎಸ್ಸಿ, ಐಐಎಂ, ಎನ್ಜಿಎಂಎ, ಚಿತ್ರಕಲಾ ಪರಿಷತ್, ಪ್ಲಾನೆಟೋರಿಯಂ, ರಂಗಶಂಕರ, ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ ಸೇರಿದಂತೆ ಹಲವು ಸಂಸ್ಥೆಗಳು ಭಾಗವಹಿಸುವ ನಿರೀಕ್ಷೆಯಿದೆ. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಎನ್ಜಿಒಗಳು, ಫೌಂಡೇಶನ್ಗಳು, ಸಿಎಸ್ಆರ್ ಸಂಸ್ಥೆಗಳು ಹಾಗೂ ಐಟಿ ಕಂಪನಿಗಳಿಗೂ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗುತ್ತದೆ.
ಒಟ್ಟಾರೆ, ಬೆಂಗಳೂರು ಜಾತ್ರೆ ಜಾರಿಯಾದರೆ ನಗರದ ಒಂದೇ ಪ್ರದೇಶವಲ್ಲ, ಇಡೀ ಬೆಂಗಳೂರೇ ಹತ್ತು ದಿನಗಳ ಕಾಲ ಉತ್ಸವದ ವೇದಿಕೆಯಾಗಲಿದೆ. ಸ್ಥಳೀಯ ಸಂಸ್ಕೃತಿ, ಆಧುನಿಕ ನಗರ ಜೀವನ ಹಾಗೂ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಒಂದೇ ಸಂಭ್ರಮದಲ್ಲಿ ಬೆಸೆಯುವ ಪ್ರಯತ್ನ ಇದಾಗಲಿದೆ.



