October 3, 2026
Saturday, October 3, 2026
spot_img

ಭಟ್ಕಳದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: 816 ಗ್ರಾಂ ಮಾಲು ಸಹಿತ ಆರೋಪಿಯ ಬಂಧನ

ಹೊಸದಿಗಂತ ವರದಿ ಭಟ್ಕಳ: ​

ಭಟ್ಕಳ ತಾಲೂಕಿನ ಹೆಬಳೆ ಗ್ರಾಮದ ಪಿರ್ಧೋಸ್ ನಗರದ ಕೋಳಿ ಫಾರ್ಮ್ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೊರ್ವನ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ಬೆಂಡೇಖಾನ ಸಾಯಿಮ್ ಮಂಜಿಲ್ ನಿವಾಸಿ ಮೊಹಮ್ಮದ್ ಸಾಯಿಮ್ (31) ಎಂದು ಗುರುತಿಸಲಾಗಿದೆ.

ಆರೋಪಿಯು ಯಾವುದೇ ಪರವಾನಗಿ ಅಥವಾ ಕಾನೂನುಬದ್ಧ ಅನುಮತಿ ಇಲ್ಲದೆ ಮಾರಾಟ ಮಾಡುವ ಉದ್ದೇಶದಿಂದ ತನ್ನ ಮಾರುತಿ ಸುಜುಕಿ ಬರ್ಗ್ಮನ್ ಸ್ಕೂಟರ್‌ನಲ್ಲಿ 816 ಗ್ರಾಂ ಗಾಂಜಾ ಇಟ್ಟುಕೊಂಡಿದ್ದು ಪೊಲೀಸರು ದಾಳಿ ನಡೆಸಿ ಮಾಲು ಸಹಿತ ಆತನನ್ನು ವಶಕ್ಕೆ ಪಡೆದಿದ್ದರು.

ವಶಪಡಿಸಿಕೊಂಡ ಗಾಂಜಾದ ಅಂದಾಜು ಮೌಲ್ಯ ರೂ.81,500 ಎಂದು ತಿಳಿಸಲಾಗಿದೆ. ಕಾರ್ಯಾಚರಣೆಯಲ್ಲಿ ಗಾಂಜಾ ಹಾಗೂ ಸ್ಕೂಟರ್‌ನ್ನು ವಶಕ್ಕೆ ಪಡೆಯಲಾಗಿದ್ದು ಗ್ರಾಮೀಣ ಪಿಎಸ್‌ಐ ಮಲ್ಲಿಕಾರ್ಜುನಯ್ಯ ಕೊರಾಣಿ ಅವರು ಸರ್ಕಾರದ ಪರವಾಗಿ ದೂರು ನೀಡಿದ್ದು, ಪಿಎಸ್‌ಐ ಭರಮಪ್ಪ ಬೆಳಗಲಿ ಅವರು ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಹಾಗೂ ಎಎಸ್‌ಪಿ ರಾಣು ಗುಪ್ತಾ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಂಜು ಗೊಂಡ, ಈರಣ್ಣ ಪೂಜೇರಿ, ಬಾಗಪ್ಪ ಕಡಕಲ್, ನಿಂಗನಗೌಡ ಪಾಟೀಲ, ಮಂಜುನಾಥ ಖಾರ್ವಿ, ಅಂಬರೀಷ್ ಕುಂಬಾರಿ, ವಿನಯ ಮಬ್ರುಮಕರ್ ಹಾಗೂ ಚಾಲಕ ಸಂತೋಷ ಹಡಪದ ಪಾಲ್ಗೊಂಡಿದ್ದರು.

Must Read