October 3, 2026
Saturday, October 3, 2026
spot_img

85 ಪದಕಗಳೊಂದಿಗೆ ಭಾರತಕ್ಕೆ 4ನೇ ಸ್ಥಾನ: ಐತಿಹಾಸಿಕ ಸಾಧನೆಗಳೊಂದಿಗೆ ಏಷ್ಯನ್ ಗೇಮ್ಸ್‌ ಗೆ ತೆರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಪಾನ್‌ನ ಐಚಿ-ನಾಗೋಯಾದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 21 ಚಿನ್ನ, 27 ಬೆಳ್ಳಿ ಹಾಗೂ 37 ಕಂಚು ಸೇರಿದಂತೆ ಒಟ್ಟು 85 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಕ್ರಿಕೆಟ್, ಹಾಕಿ, ಕುಸ್ತಿ, ಬಾಕ್ಸಿಂಗ್, ಬಿಲ್ಲುಗಾರಿಕೆ, ಅಥ್ಲೆಟಿಕ್ಸ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಗಮನಾರ್ಹ ಪ್ರದರ್ಶನ ನೀಡಿದ್ದು, ಹಲವು ಹೊಸ ದಾಖಲೆಗಳು ಮತ್ತು ಐತಿಹಾಸಿಕ ಸಾಧನೆಗಳಿಗೆ ಸಾಕ್ಷಿಯಾದರು.

ಭಾರತ ಹೊಸ ಮೈಲಿಗಲ್ಲು

ಸುಮಾರು 500 ಕ್ರೀಡಾಪಟುಗಳನ್ನು ಒಳಗೊಂಡಿದ್ದ ಭಾರತೀಯ ತಂಡದ ಈ ಸಾಧನೆ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ದೇಶದ ಎರಡನೇ ಗರಿಷ್ಠ ಪದಕ ಬೇಟೆಯಾಗಿದೆ. 2023ರ ಹ್ಯಾಂಗ್‌ಝೌ ಕ್ರೀಡಾಕೂಟದಲ್ಲಿ ಭಾರತ 28 ಚಿನ್ನ ಸೇರಿದಂತೆ ಒಟ್ಟು 107 ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿತ್ತು. ಈ ಬಾರಿ ಆ ದಾಖಲೆಯನ್ನು ಮೀರಲು ಸಾಧ್ಯವಾಗದಿದ್ದರೂ, ಹಲವು ವಿಭಾಗಗಳಲ್ಲಿ ಭಾರತ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ.

ಅಥ್ಲೆಟಿಕ್ಸ್ ನಲ್ಲಿ ಗರಿಷ್ಠ ಪದಕ

ಅಥ್ಲೆಟಿಕ್ಸ್ ಭಾರತಕ್ಕೆ ಗರಿಷ್ಠ 24 ಪದಕಗಳನ್ನು ತಂದುಕೊಟ್ಟರೆ, ಶೂಟಿಂಗ್‌ನಲ್ಲಿ 15 ಪದಕಗಳು ಲಭಿಸಿವೆ. ಚಿನ್ನದ ಪದಕಗಳ ಸಂಖ್ಯೆಯಲ್ಲಿ ಬಿಲ್ಲುಗಾರಿಕೆ ಐದು ಸ್ವರ್ಣಗಳೊಂದಿಗೆ ಮುಂಚೂಣಿಯಲ್ಲಿದ್ದು, ಬಾಕ್ಸಿಂಗ್‌ನಲ್ಲಿ ಮೂರು ಚಿನ್ನಗಳು ಬಂದಿವೆ. ಲವ್ಲಿನಾ ಬೊರ್ಗೊಹೈನ್, ಅಮನ್ ಸೆಹ್ರಾವತ್ ಹಾಗೂ ಸುಜೀತ್ ಕಲ್ಕಲ್ ಸೇರಿದಂತೆ ಹಲವು ಕ್ರೀಡಾಪಟುಗಳು ತಮ್ಮ ವಿಭಾಗಗಳಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ.

ಪುರುಷರ ಹಾಗೂ ಮಹಿಳೆಯರ ಪದಕ ಬೇಟೆ

ತಂಡ ಕ್ರೀಡೆಗಳಲ್ಲೂ ಭಾರತ ಪ್ರಾಬಲ್ಯ ಮೆರೆದಿದೆ. ಪುರುಷರ ಹಾಗೂ ಮಹಿಳೆಯರ ಕ್ರಿಕೆಟ್ ತಂಡಗಳು ಸತತವಾಗಿ ಏಷ್ಯನ್ ಗೇಮ್ಸ್ ಚಿನ್ನ ಉಳಿಸಿಕೊಂಡಿದ್ದು, ಪುರುಷರ ತಂಡ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿತು. ಎರಡೂ ಕಬಡ್ಡಿ ತಂಡಗಳು ಚಿನ್ನ ಗೆದ್ದರೆ, ಮಹಿಳಾ ಹಾಕಿ ತಂಡ 44 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್ ಚಿನ್ನದ ಪದಕಕ್ಕೆ ಮುತ್ತಿಕ್ಕಿತು. ಪುರುಷರ ಹಾಕಿ ತಂಡವೂ ಚಿನ್ನ ಗೆದ್ದು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದೆ.

ಗಾಲ್ಫ್‌ನಲ್ಲಿ ಪ್ರಣವಿ ಉರ್ಸ್ ಏಷ್ಯನ್ ಗೇಮ್ಸ್‌ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬಿಲ್ಲುಗಾರಿಕೆಯಲ್ಲಿ 17 ವರ್ಷದ ಕುಂಕುಮ್ ಮೊಹೋಡ್ ವೈಯಕ್ತಿಕ ರಿಕರ್ವ್ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆಯಾದರು. ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್‌ನಲ್ಲಿ ಸುಚಿಕಾ ತರಿಯಾಲ್ ಭಾರತಕ್ಕೆ ಮೊದಲ ಏಷ್ಯನ್ ಗೇಮ್ಸ್ ಪದಕ ತಂದುಕೊಟ್ಟರೆ, ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಗೆದ್ದು 28 ವರ್ಷಗಳ ಬಳಿಕ ಭಾರತಕ್ಕೆ ಈ ವಿಭಾಗದಲ್ಲಿ ಪದಕ ತಂದುಕೊಟ್ಟರು.

ಬಿಲ್ಲುಗಾರಿಕೆ ಮತ್ತು ಹಾಕಿಯಲ್ಲಿ ಲಭಿಸಿದ ಒಲಿಂಪಿಕ್ ಕೋಟಾ ಸ್ಥಾನಗಳು ಭಾರತದ ಮುಂದಿನ ಗುರಿಗೆ ಮತ್ತಷ್ಟು ಮಹತ್ವ ನೀಡಿವೆ. ಹಲವು ಹೊಸ ದಾಖಲೆಗಳು, ಚೊಚ್ಚಲ ಪದಕಗಳು ಹಾಗೂ ಚಿನ್ನದ ಸಾಧನೆಗಳೊಂದಿಗೆ 2026ರ ಏಷ್ಯನ್ ಗೇಮ್ಸ್ ಭಾರತಕ್ಕೆ ಕ್ರೀಡಾ ಇತಿಹಾಸದ ಮತ್ತೊಂದು ಮಹತ್ವದ ಅಧ್ಯಾಯವಾಗಿ ಉಳಿದಿದೆ.

Must Read