October 4, 2026
Sunday, October 4, 2026
spot_img

ಆಸ್ಕರ್ ರೇಸ್‌ನಲ್ಲಿ ನಾಗಾ ಭಾಷೆಯ ‘ಅಂಗ್’ ಸಿನಿಮಾ: ಈಶಾನ್ಯ ಭಾರತದ ಚಿತ್ರಕ್ಕೆ ಜಾಗತಿಕ ಮನ್ನಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗ ಎಂದಾಗ ಸಾಮಾನ್ಯವಾಗಿ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಪ್ರಮುಖ ಚಿತ್ರೋದ್ಯಮಗಳ ಹೆಸರುಗಳು ಮುಂಚೂಣಿಗೆ ಬರುತ್ತವೆ. ಆದರೆ ಈ ಸಾಂಪ್ರದಾಯಿಕ ವಲಯದಾಚೆಗೂ ಪ್ರತಿಭೆ ಮತ್ತು ವಿಭಿನ್ನ ಕಥೆಗಳಿಗೆ ಜಾಗತಿಕ ವೇದಿಕೆಯಲ್ಲಿ ಅವಕಾಶವಿದೆ ಎಂಬುದನ್ನು ನಾಗಾಲ್ಯಾಂಡ್‌ನ ಯುವ ನಿರ್ದೇಶಕ ತೇಜಾ ರಿಯೊ ಅವರ ‘ಅಂಗ್’ ಚಿತ್ರ ಸಾಬೀತುಪಡಿಸಿದೆ.

ಸ್ಥಳೀಯ ನೆಲ, ಸಂಸ್ಕೃತಿ ಮತ್ತು ಇತಿಹಾಸವನ್ನು ಆಧರಿಸಿರುವ ಈ ಕಡಿಮೆ ಬಜೆಟ್‌ನ ನಾಗಾ ಭಾಷೆಯ ಚಿತ್ರ ಇದೀಗ ಆಸ್ಕರ್ ಅರ್ಹತೆಯ ಹಾದಿ ಹಿಡಿದಿದೆ.

35 ವರ್ಷದ ತೇಜಾ ರಿಯೊ ನಿರ್ದೇಶಿಸಿರುವ ‘ಅಂಗ್’ ಅವರ ಐದನೇ ಚಿತ್ರವಾಗಿದೆ. ನಾಗಾ ಭಾಷೆಯಲ್ಲೇ ತಮ್ಮ ಸಿನಿಮಾಗಳನ್ನು ರೂಪಿಸುತ್ತಿರುವ ಅವರು, ಈ ಹಿಂದೆ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಗಮನ ಸೆಳೆದಿದ್ದಾರೆ. ಅವರ ಇತ್ತೀಚಿನ ಚಿತ್ರ ‘ಅಂಗ್’ ಪ್ರತಿಷ್ಠಿತ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಗೆದ್ದಿರುವುದು ವಿಶೇಷ. ಈ ಸಾಧನೆಯೇ ಚಿತ್ರಕ್ಕೆ ಆಸ್ಕರ್ ಪರಿಗಣನೆಗೆ ನೇರ ಅರ್ಹತೆ ದೊರೆಯಲು ಕಾರಣವಾಗಿದೆ.

ಇದನ್ನೂ ಓದಿ:

1960ರ ದಶಕದ ನಾಗಾಲ್ಯಾಂಡ್ ಕಥೆ

‘ಅಂಗ್’ ಚಿತ್ರದ ಕಥೆ 1960ರ ದಶಕದ ನಾಗಾಲ್ಯಾಂಡ್‌ನ ಗ್ರಾಮೀಣ ಪರಿಸರದಲ್ಲಿ ಸಾಗುತ್ತದೆ. ಗ್ರಾಮ ಅಥವಾ ಸಮುದಾಯದ ನಾಯಕನನ್ನು ‘ಅಂಗ್’ ಎಂದು ಕರೆಯಲಾಗುತ್ತದೆ. ಅಂತಹ ನಾಯಕ ಮತ್ತು ಆತನ ಮಗನ ಸುತ್ತ ಚಿತ್ರದ ಕಥೆ ಹೆಣೆದಿದೆ. ಕ್ರೈಸ್ತ ಧರ್ಮದ ಪ್ರಚಾರಕ್ಕಾಗಿ ಆಗಮಿಸುವ ಮಿಷನರಿಗಳು ಗ್ರಾಮಸ್ಥರನ್ನು ಮತಾಂತರಗೊಳಿಸುವ ಹಿನ್ನೆಲೆಯಲ್ಲಿ, ಕೆಲವರು ಉತ್ತಮ ಜೀವನದ ಹುಡುಕಾಟದಲ್ಲಿ ಪಟ್ಟಣಗಳತ್ತ ತೆರಳುತ್ತಾರೆ. ಆದರೆ ಗ್ರಾಮನಾಯಕ ಹಾಗೂ ಆತನ ಮಗ ತಮ್ಮ ನೆಲ ಮತ್ತು ನಂಬಿಕೆಗಳೊಂದಿಗೆ ದೃಢವಾಗಿ ನಿಲ್ಲುತ್ತಾರೆ. ಈ ಸಂಘರ್ಷವೇ ಚಿತ್ರದ ಪ್ರಮುಖ ಕಥಾಹಂದರವಾಗಿದೆ.

ಈಶಾನ್ಯ ಭಾರತದ ಸ್ಥಳೀಯ ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕ ವಾಸ್ತವವನ್ನು ಜಾಗತಿಕ ಪ್ರೇಕ್ಷಕರ ಮುಂದೆ ತರುವ ಪ್ರಯತ್ನವಾಗಿಯೂ ‘ಅಂಗ್’ ಗಮನ ಸೆಳೆದಿದೆ. ಚಿತ್ರೋತ್ಸವದಲ್ಲಿ ಗಳಿಸಿದ ಮನ್ನಣೆಯಿಂದಾಗಿ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಇನ್ನೊಂದೆಡೆ, ಮರಾಠಿ ಚಿತ್ರ ‘ಗೊಂದಲ್’ ಭಾರತದಿಂದ ಅಧಿಕೃತ ಆಸ್ಕರ್ ಪ್ರವೇಶವಾಗಿ ಆಯ್ಕೆಯಾಗಿದೆ. ‘ಅಂಗ್’ ಕೂಡ ಆಸ್ಕರ್ ಸ್ಪರ್ಧೆಯ ಅಂತಿಮ ಹಂತದಲ್ಲಿ ಸ್ಥಾನ ಪಡೆಯುತ್ತದೆಯೇ ಎಂಬುದು ಮುಂದಿನ ಪ್ರಕ್ರಿಯೆಯಲ್ಲಿ ಸ್ಪಷ್ಟವಾಗಬೇಕಿದೆ.

Must Read