ಹೊಸದಿಗಂತ ಡಿಜಿಟಲ್ ಡೆಸ್ಕ್:
ತಂತ್ರಜ್ಞಾನ ಬೆಳೆದಂತೆ ಅದರ ದುರ್ಬಳಕೆಯೂ ಹೆಚ್ಚಾಗುತ್ತಿದೆ ಎಂಬುದಕ್ಕೆ ‘ದೇವರ’ ಚಿತ್ರದ ‘ಚುಟ್ಟಮಲ್ಲೆ’ ಹಾಡಿನ ಎಐ ಮಾರ್ಫಿಂಗ್ ವೀಡಿಯೋ ವಿವಾದವೇ ಸಾಕ್ಷಿ. ಜೂನಿಯರ್ ಎನ್‌ಟಿಆರ್ ಮತ್ತು ಜಾನ್ವಿ ಕಪೂರ್ ಅವರ ನಕಲಿ ವೀಡಿಯೋವನ್ನು ಕೃತಕ ಬುದ್ಧಿಮತ್ತೆಯ ಮೂಲಕ ಸೃಷ್ಟಿಸಿ ಹರಿಬಿಟ್ಟ ಕೃತ್ಯವನ್ನು ನಟ ಜೂ. ಎನ್‌ಟಿಆರ್ ಖಂಡಿಸಿದ ಬೆನ್ನಲ್ಲೇ, ನಟಿ ಜಾನ್ವಿ ಕಪೂರ್ ಹೇಳಿಕೆಯೊಂದನ್ನು ಹಂಚಿಕೊಂಡಿದ್ದಾರೆ.

ಜಾನ್ವಿ ಖಡಕ್ ಸಂದೇಶ
ಇನ್ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ಜಾನ್ವಿ, “ಮಹಿಳೆಯರ ಒಪ್ಪಿಗೆ ಇಲ್ಲದೆ ಅವರ ವೀಡಿಯೋಗಳನ್ನು ಮಾರ್ಫಿಂಗ್ ಮಾಡಿ ಹಂಚಿಕೊಳ್ಳುವುದು ಲೈಂಗಿಕ ದೌರ್ಜನ್ಯಕ್ಕೆ ಸಮಾನ” ಎಂದು ಗುಡುಗಿದ್ದಾರೆ. ತಂತ್ರಜ್ಞಾನವನ್ನು ಬಳಸಿ ಹೆಣ್ಣಿನ ದೇಹವನ್ನು ವಸ್ತುವಿನಂತೆ ಬಿಂಬಿಸುವುದು ಅಪರಾಧ ಎಂದಿದ್ದಾರೆ.
ಹೆಣ್ಣುಮಕ್ಕಳ ನಿರ್ಧಾರ ಗೌರವಿಸಿ
ಮಹಿಳೆಯರ ಆಯ್ಕೆ ಮತ್ತು ಲಿಮಿಟ್ಸ್ ಗಳ ಬಗ್ಗೆ ಸ್ಪಷ್ಟವಾಗಿ ಮಾತನಾಡಿರುವ ಅವರು, “ಒಬ್ಬ ಮಹಿಳೆ ಐದು ದಿನ ‘ಹೌದು’ ಎಂದು ಹೇಳಿ ಆರನೇ ದಿನ ‘ಇಲ್ಲ’ ಎಂದರೆ, ಆ ಇಲ್ಲ ಎಂಬುದನ್ನು ಪ್ರತಿಯೊಬ್ಬರೂ ಗೌರವಿಸಲೇಬೇಕು. ಆಕೆ ಯಾವುದೇ ಉಡುಪು ಧರಿಸಿರಲಿ, ಆಕೆಯ ಅನುಮತಿಯಿಲ್ಲದೆ ಕ್ಯಾಮೆರಾ ಹಿಡಿಯುವುದು ಅಥವಾ ವೀಡಿಯೋ ಮಾಡುವುದು ಆಕೆಯ ದೇಹದ ಮೇಲಿನ ದಾಳಿಯಾಗಿದೆ” ಎಂದು ನುಡಿದಿದ್ದಾರೆ.

ಚಿತ್ರರಂಗದ ದಿಗ್ಗಜರಿಗೆ ಕೃತಜ್ಞತೆ
ವಾಸ್ತವ ಪ್ರಪಂಚದಲ್ಲಿ ಮಹಿಳೆಯರು ಪ್ರತಿದಿನ ತಮ್ಮ ರಕ್ಷಣೆಗಾಗಿ ನಡೆಸುವ ಹೋರಾಟವು ಈಗ ಡಿಜಿಟಲ್ ರೂಪದಲ್ಲೂ ಬೆದರಿಕೆಯಾಗಿ ಎದುರಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಜೂ. ಎನ್‌ಟಿಆರ್ ಅವರಿಗೆ ಕೃತಜ್ಞತೆ ಸಲ್ಲಿಸಿದ ಜಾನ್ವಿ, ತಮ್ಮ ಬೆಂಬಲಕ್ಕೆ ನಿಂತ ಚಿರಂಜೀವಿ, ವಿಜಯ್ ದೇವರಕೊಂಡ ಹಾಗೂ ಖುಷ್ಬೂ ಸುಂದರ್ ಅವರಿಗೂ ಧನ್ಯವಾದ ಅರ್ಪಿಸಿದ್ದಾರೆ.
“ಪ್ರತಿಯೊಬ್ಬ ಮಹಿಳೆಗೂ ತನ್ನ ದೇಹ, ತನ್ನ ಚಿತ್ರಣ ಮತ್ತು ತನ್ನ ನಿರ್ಧಾರಗಳ ಮೇಲೆ ಸಂಪೂರ್ಣ ಹಕ್ಕಿದೆ. ಹೆಣ್ಣನ್ನು ಒಬ್ಬ ಮನುಷ್ಯಳಾಗಿ ನೋಡುವುದು ಅಷ್ಟೊಂದು ಕಷ್ಟವೇ?” ಎಂಬ ಜಾನ್ವಿ ಕಪೂರ್ ಅವರ ಪ್ರಶ್ನೆ, ಇಡೀ ಸಮಾಜ ಮತ್ತು ನೆಟ್ಟಿಗರು ತಮ್ಮ ನಡವಳಿಕೆಯನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ.



