ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮುದ್ರ ಮಾರ್ಗದ ಸಾಗಣೆ ವೇಳೆ ಅನುಮಾನಾಸ್ಪದ ಸರಕು ಪತ್ತೆಯಾದ ಹಿನ್ನೆಲೆಯಲ್ಲಿ ಇಂಡೋನೇಷ್ಯಾ ನೌಕಾಪಡೆ ಭಾರೀ ಕಾರ್ಯಾಚರಣೆ ನಡೆಸಿದೆ. ಚೀನಾದಿಂದ ಬಾಂಗ್ಲಾದೇಶಕ್ಕೆ ತೆರಳುತ್ತಿದ್ದ ಸರಕು ಹಡಗನ್ನು ತಡೆದು ಪರಿಶೀಲಿಸಿದಾಗ, ಕ್ಷಿಪಣಿ ಪ್ರೊಪೆಲ್ಲಂಟ್ಗಳ ತಯಾರಿಕೆಯಲ್ಲಿ ಬಳಸಬಹುದಾದ 405 ಟನ್ ಸೋಡಿಯಂ ಪರ್ಕ್ಲೋರೇಟ್ ಹಾಗೂ ನೋಂದಣಿಯಾಗದ ಲಕ್ಷಾಂತರ ಸಿಮ್ ಕಾರ್ಡ್ಗಳು ಪತ್ತೆಯಾಗಿವೆ. ಈ ಪ್ರಮಾಣದ ರಾಸಾಯನಿಕದಿಂದ ಸುಮಾರು 100 ಕ್ಷಿಪಣಿಗಳನ್ನು ತಯಾರಿಸಲು ಸಾಧ್ಯವಿರಬಹುದು ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕೊಮೊರೊಸ್ ದೇಶದ ಧ್ವಜ ಹೊಂದಿದ್ದ ಎಂವಿ ಸ್ಟಾರ್ ಲೈನ್ (MV Star Line) ಎಂಬ ಹಡಗು ಚೀನಾದ ಲಿಯಾನ್ಯುಂಗಾಂಗ್ ಬಂದರಿನಿಂದ ಬಾಂಗ್ಲಾದೇಶದ ಮೊಂಗ್ಲಾ ಬಂದರಿಗೆ ತೆರಳುತ್ತಿತ್ತು. ನವೆಂಬರ್ 7ರಂದು ಉತ್ತರ ಸುಮಾತ್ರದ ಬೆಲಾವನ್ ಸಮೀಪ ಇಂಡೋನೇಷ್ಯಾದ ಜಲಪ್ರದೇಶದಲ್ಲಿ ಈ ಹಡಗನ್ನು ನೌಕಾಪಡೆ ತಡೆದಿತ್ತು. ನವೆಂಬರ್ 8ರಂದು ಬಾಂಗ್ಲಾದೇಶ ತಲುಪಬೇಕಿದ್ದ ಹಡಗು ಮಾರ್ಗ ಮಧ್ಯೆ ಅನುಮಾನಾಸ್ಪದವಾಗಿ ನಿಂತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿತ್ತು.
ನಿಗದಿತ ಮಾರ್ಗದಿಂದ ಹೊರಳಿ ಇಂಧನ ತುಂಬಿಸಿಕೊಳ್ಳುವ ನೆಪದಲ್ಲಿ ಇಂಡೋನೇಷ್ಯಾದ ಜಲಪ್ರದೇಶದಲ್ಲಿ ನಿಂತಿದ್ದ ಹಡಗಿನ ಚಲನವಲನಗಳ ಬಗ್ಗೆ ಗಸ್ತು ನೌಕೆಯ ಸಿಬ್ಬಂದಿಗೆ ಅನುಮಾನ ಮೂಡಿತ್ತು. ರೇಡಿಯೋ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಸಿಬ್ಬಂದಿಯಿಂದ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಹಡಗನ್ನು ತಡೆದು ಪರಿಶೀಲನೆ ನಡೆಸಲಾಯಿತು.
15 ಕಂಟೈನರ್ಗಳಲ್ಲಿ 405 ಟನ್ ರಾಸಾಯನಿಕ
ಹಡಗಿನ 36 ಕಂಟೈನರ್ಗಳನ್ನು ಪರಿಶೀಲಿಸಿದಾಗ, 15 ಕಂಟೈನರ್ಗಳಲ್ಲಿ ಒಟ್ಟು 405 ಟನ್ ಸೋಡಿಯಂ ಪರ್ಕ್ಲೋರೇಟ್ ಪತ್ತೆಯಾಗಿದೆ. ಇದರ ಜೊತೆಗೆ 54 ಪ್ಯಾಲೆಟ್ಗಳಲ್ಲಿ ಲಕ್ಷಾಂತರ ನೋಂದಣಿಯಾಗದ ಖಾಲಿ 4G LTE ಸಿಮ್ ಕಾರ್ಡ್ಗಳೂ ದೊರೆತಿವೆ.
ಇದನ್ನೂ ಓದಿ:
ಇಂಡೋನೇಷ್ಯಾ ನೌಕಾಪಡೆಯ ಪ್ರಾದೇಶಿಕ ಕಮಾಂಡ್-I ಮುಖ್ಯಸ್ಥ ರಿಯರ್ ಅಡ್ಮಿರಲ್ ಡೆನ್ನಿ ಸೆಪ್ಟಿಯಾನಾ ಪ್ರಕಾರ, ಸೋಡಿಯಂ ಪರ್ಕ್ಲೋರೇಟ್ ರಾಕೆಟ್ ಹಾಗೂ ಕ್ಷಿಪಣಿ ಪ್ರೊಪೆಲ್ಲಂಟ್ಗಳ ತಯಾರಿಕೆಯಲ್ಲಿ ಬಳಸುವ ಪ್ರಮುಖ ಆಕ್ಸಿಡೈಸಿಂಗ್ ರಾಸಾಯನಿಕವಾಗಿದೆ. ವಶಪಡಿಸಿಕೊಂಡ ಪ್ರಮಾಣದಿಂದ ಸುಮಾರು 100 ಕ್ಷಿಪಣಿಗಳನ್ನು ತಯಾರಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ಈ ರಾಸಾಯನಿಕವು ಕೈಗಾರಿಕಾ ಬಳಕೆಯಲ್ಲೂ ಉಪಯೋಗವಾಗುತ್ತದೆ.
ಹಡಗಿನ ದಾಖಲೆಗಳಲ್ಲೂ ಅನುಮಾನ
ಸರಕು ಪರಿಶೀಲನೆಯ ವೇಳೆ ಹಡಗಿನ ನೋಂದಣಿ ಹಾಗೂ ಸಾಗಣೆ ದಾಖಲೆಗಳಲ್ಲೂ ವ್ಯತ್ಯಾಸಗಳು ಕಂಡುಬಂದಿವೆ. ದಾಖಲೆಗಳಲ್ಲಿ ನೋಂದಣಿ ಮಾನ್ಯವಾಗಿರುವುದಾಗಿ ಉಲ್ಲೇಖಿಸಿದ್ದರೂ, ಅದರ ಸ್ಥಿತಿ ಅಮಾನತುಗೊಂಡಿರುವುದಾಗಿ ಅಧಿಕಾರಿಗಳ ಪರಿಶೀಲನೆಯಲ್ಲಿ ತಿಳಿದುಬಂದಿದೆ. ಅಪಾಯಕಾರಿ ಸರಕು ಸಾಗಣೆ ನಿಯಮಗಳು ಹಾಗೂ ಹಡಗಿನ ಅನುಮತಿಗಳ ಕುರಿತು ತನಿಖೆ ನಡೆಯುತ್ತಿದೆ.



