October 5, 2026
Monday, October 5, 2026
spot_img

ನಿಮ್ಮ ಮಗುವಿನ ಈ ನಡವಳಿಕೆಗಳ ಹಿಂದಿದೆ ಅಪಾರ ಪ್ರೀತಿ: ಪೋಷಕರು ತಿಳಿಯಲೇಬೇಕಾದ ಸಂಗತಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳು ನಗುತ್ತಾ, ಖುಷಿಯಾಗಿರಬೇಕು ಎಂಬ ಆಸೆ ಇರುತ್ತದೆ. ಆದರೆ, ನಾನು ಉತ್ತಮ ಪೋಷಕರಾ? ನನ್ನ ಮಗು ನಿಜವಾಗಿಯೂ ಸಂತೋಷವಾಗಿದೆಯಾ? ಎಂಬ ಗೊಂದಲ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಕಾಡುವುದು ಸಹಜ. ಸಂತೋಷ ಎಂಬುದು ಕೇವಲ ಆಟಿಕೆಗಳನ್ನು ಕೊಡುವುದು ಅಥವಾ ಸಿಹಿತಿಂಡಿ ಕೊಡಿಸುವುದರಿಂದ ಮಾತ್ರ ಸಿಗುವುದಿಲ್ಲ. ಅದು ಅವರ ನಡೆ-ನುಡಿ ಮತ್ತು ಭರವಸೆಯ ನಡವಳಿಕೆಯಲ್ಲಿ ವ್ಯಕ್ತವಾಗುತ್ತದೆ.

ನಿಮ್ಮ ಮಗು ನಿಜವಾಗಿಯೂ ಆನಂದವಾಗಿದೆಯೇ ಮತ್ತು ನಿಮ್ಮ ಹಾಗೂ ಮಗುವಿನ ಸಂಬಂಧ ನೀವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಆರೋಗ್ಯಕರವಾಗಿದೆಯೇ ಎಂದು ತಿಳಿಯಲು ಈ ಲಕ್ಷಣಗಳನ್ನು ಗಮನಿಸಿ:

ಎಕ್ಸ್ಪ್ರೆಸ್ಸಿಂಗ್ ಫೀಲಿಂಗ್ಸ್

ಅನೇಕರು ಮಗು ಯಾವಾಗಲೂ ನಗುತ್ತಿದ್ದರೆ ಮಾತ್ರ ಸಂತೋಷವಾಗಿದೆ ಎಂದುಕೊಳ್ಳುತ್ತಾರೆ. ಆದರೆ ನಿಜವಾದ ಸಂತೋಷ ಮತ್ತು ಭದ್ರತೆಯ ಲಕ್ಷಣವೆಂದರೆ ಮಗು ನಿಮ್ಮ ಮುಂದೆ ಅಳುವುದು, ಕೋಪಗೊಳ್ಳುವುದು ಅಥವಾ ಹಠ ಮಾಡುವುದು. ಮಗು ತನ್ನ ಭಿನ್ನ ಭಾವನೆಗಳನ್ನು ನಿಮ್ಮ ಮುಂದೆ ತಡೆಹಿಡಿಯದೇ ವ್ಯಕ್ತಪಡಿಸುತ್ತದೆ ಎಂದರೆ, “ನನ್ನ ಹೆತ್ತವರ ಮುಂದೆ ನಾನು ಹೇಗಿದ್ದರೂ ಅವರು ನನ್ನನ್ನು ಪ್ರೀತಿಸುತ್ತಾರೆ, ನನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ” ಎಂಬ ಸುರಕ್ಷಿತ ಭಾವನೆ ಅದರ ಮನಸ್ಸಿನಲ್ಲಿದೆ ಎಂದರ್ಥ.

ಮೆಂಟಲ್ ಸ್ಟೆಬಿಲಿಟಿ

ಮಗು ಗಂಟೆಗಟ್ಟಲೆ ನಿಮ್ಮನ್ನೇ ಅಂಟಿಕೊಂಡಿರದೆ, ತನ್ನದೇ ಆದ ಪ್ರಪಂಚದಲ್ಲಿ ಮುಳುಗಿರುವುದು ಅವರ ಮಾನಸಿಕ ಆರೋಗ್ಯದ ಸಂಕೇತ. ಅವರು ತಮ್ಮದೇ ಆದ ಕಲ್ಪನಾ ಲೋಕವನ್ನು ಸೃಷ್ಟಿಸಿಕೊಂಡು, ಬೊಂಬೆಗಳೊಂದಿಗೆ ಮಾತನಾಡುವುದು ಅಥವಾ ಚಿತ್ರ ಬಿಡಿಸುವುದರಲ್ಲಿ ನಿರತರಾಗಿದ್ದರೆ, ಅವರ ಮನಸ್ಸು ಶಾಂತವಾಗಿದೆ ಎಂದರ್ಥ. ಪೋಷಕರು ತಮ್ಮ ಬೆಂಬಲಕ್ಕೆ ಇದ್ದಾರೆ ಎಂಬ ಧೈರ್ಯ ಮಗುವಿನಲ್ಲಿ ಇದ್ದಾಗ ಮಾತ್ರ ಅವರು ಯಾವುದೇ ಭಯವಿಲ್ಲದೆ ಸ್ವತಂತ್ರವಾಗಿ ಹೊಸ ವಿಷಯಗಳನ್ನು ಅನ್ವೇಷಿಸಲು ಮುಂದಾಗುತ್ತಾರೆ.

ಫೀಲಿಂಗ್ ಸೇಫ್

ನಿಮ್ಮ ಮಗು ತಾನು ಮಾಡಿದ ಸಣ್ಣಪುಟ್ಟ ತಪ್ಪುಗಳನ್ನು ಮುಚ್ಚಿಡದೆ ನಿಮ್ಮ ಬಳಿ ಬಂದು ನೇರವಾಗಿ ಹೇಳುತ್ತದೆಯೇ? ಹಾಗಿದ್ದಲ್ಲಿ, ನಿಮ್ಮಿಬ್ಬರ ಸಂಬಂಧ ಬಹಳ ಗಟ್ಟಿಯಾಗಿದೆ. ನಿಮ್ಮ ಶಿಕ್ಷೆಗೆ ಹೆದರಿ ಸುಳ್ಳು ಹೇಳುವ ಬದಲು, ನಿಮ್ಮ ಪ್ರೀತಿ ಮತ್ತು ಮಾರ್ಗದರ್ಶನದ ಮೇಲೆ ನಂಬಿಕೆಯಿಟ್ಟು ಸತ್ಯ ಹೇಳುವುದು ಮಗುವಿನ ಮಾನಸಿಕ ಬಲವನ್ನು ತೋರಿಸುತ್ತದೆ. ನಿಮ್ಮ ಬಳಿ ಬಂದರೆ ತಮಗೆ ಸುರಕ್ಷತೆ ಸಿಗುತ್ತದೆ ಎಂಬ ನಂಬಿಕೆ ಅವರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ.

ಪ್ರಶ್ನೆ ಮೇಲೆ ಪ್ರಶ್ನೆ

ಆಕಾಶ ಯಾಕೆ ನೀಲಿಯಾಗಿದೆ?, ಹಕ್ಕಿ ಹೇಗೆ ಹಾರುತ್ತೆ? ಈ ರೀತಿಯ ಕೊನೆಮೊದಲಿಲ್ಲದ ಪ್ರಶ್ನೆಗಳನ್ನು ನಿಮ್ಮ ಮಕ್ಕಳು ಕೇಳುತ್ತಿದ್ದರೆ ಕೋಪಿಸಿಕೊಳ್ಳಬೇಡಿ. ಮಗು ಸತತವಾಗಿ ಪ್ರಶ್ನೆ ಕೇಳುತ್ತಿದೆ ಎಂದರೆ ಅವರ ಮೆದುಳು ಚುರುಕಾಗಿದೆ, ಅವರಲ್ಲಿ ಜ್ಞಾನದ ಹಸಿವಿದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮೊಂದಿಗೆ ಸಂವಹನ ನಡೆಸಲು ಅವರು ಇಷ್ಟಪಡುತ್ತಿದ್ದಾರೆ ಎಂದರ್ಥ. ತಮಗೆ ಸಿಗುವ ಉತ್ತರಗಳಿಂದ ಅವರು ಜಗತ್ತನ್ನು ಅರ್ಥೈಸಿಕೊಳ್ಳುತ್ತಿದ್ದಾರೆ ಮತ್ತು ನಿಮ್ಮನ್ನು ತಮ್ಮ ಅತ್ಯುತ್ತಮ ಮಾರ್ಗದರ್ಶಿ ಎಂದು ಭಾವಿಸುತ್ತಿದ್ದಾರೆ.

ಹೆಲ್ಪಿಂಗ್ ನೇಚರ್

ನೀವು ಅಡುಗೆ ಮಾಡುತ್ತಿರುವಾಗ, ಬಟ್ಟೆ ಮಡಚುತ್ತಿರುವಾಗ ಅಥವಾ ಗಿಡಕ್ಕೆ ನೀರು ಹಾಕುವಾಗ ಮಗು ಓಡಿಬಂದು ನಾನೂ ಮಾಡ್ತೀನಿ, ಎಂದು ಪಟ್ಟು ಹಿಡಿಯುತ್ತದೆಯೇ? ಇದು ಕೇವಲ ಆಟವಲ್ಲ, ಬದಲಿಗೆ ಅವರಿಗೆ ಕುಟುಂಬದ ಭಾಗವಾಗಿರಲು ಇರುವ ಆಸೆ. ಮಗು ನಿಮ್ಮ ಕೆಲಸದಲ್ಲಿ ಭಾಗಿಯಾಗಲು ಬಯಸುತ್ತದೆ ಎಂದರೆ ಅವರಿಗೆ ನಿಮ್ಮ ಜೊತೆ ಸಮಯ ಕಳೆಯುವುದು ಎಂದರೆ ಇಷ್ಟ ಎಂದರ್ಥ. ಅಲ್ಲದೆ, ಇದರಿಂದ ತಮ್ಮನ್ನೂ ಮನೆಯ ಒಬ್ಬ ಜವಾಬ್ದಾರಿಯುತ ಸದಸ್ಯನೆಂದು ಪರಿಗಣಿಸಲಾಗುತ್ತಿದೆ ಎಂಬ ಸಂತೋಷ ಅವರಲ್ಲಿ ಮೂಡುತ್ತದೆ.

ಕೇರಿಂಗ್ & ಪೇರೆಂಟಿಂಗ್

ನಿಜವಾದ ಸಂತೋಷದಲ್ಲಿರುವ ಮಗು ತನ್ನ ಸುತ್ತಲಿರುವವರನ್ನೂ ಪ್ರೀತಿಸುತ್ತದೆ. ನೀವು ಸುಸ್ತಾಗಿದ್ದಾಗ ತಾನಾಗಿಯೇ ಬಂದು ಅಪ್ಪಿಕೊಳ್ಳುವುದು, ಕುಡಿಯಲು ನೀರು ತಂದುಕೊಡುವುದು ಅಥವಾ “ಅಮ್ಮ/ಅಪ್ಪ ಐ ಲವ್ ಯು” ಎಂದು ಹೇಳುವುದು ಈ ಸಣ್ಣ ಸಣ್ಣ ಕ್ಷಣಗಳು ಮಗುವಿನ ಮನಸ್ಸಿನಲ್ಲಿರುವ ಶಾಂತಿ ಮತ್ತು ಪ್ರೀತಿಯನ್ನು ಬಿಂಬಿಸುತ್ತವೆ. ನಿಮ್ಮ ಪೋಷಕತ್ವದ ಪ್ರೀತಿ ಮಗುವಿಗೆ ತಲುಪಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ.

ಪೋಷಕರಾಗಿ ನಾವು ಪರಿಪೂರ್ಣವಾಗಿರಬೇಕಾಗಿಲ್ಲ. ಸಣ್ಣಪುಟ್ಟ ತಪ್ಪುಗಳು, ಕೋಪ-ತಾಪಗಳು ಪ್ರತಿಯೊಬ್ಬರ ಮನೆಯಲ್ಲೂ ಸಹಜ. ಆದರೆ ನಿಮ್ಮ ಮಗು ನಿಮ್ಮ ಬಳಿ ಸುರಕ್ಷಿತವಾಗಿ, ಸ್ವತಂತ್ರವಾಗಿ ಮತ್ತು ಸಂತೋಷದಿಂದ ತನ್ನ ಮುಗ್ಧತೆಯನ್ನು ವ್ಯಕ್ತಪಡಿಸುತ್ತಿದ್ದರೆ, ನೀವು ಒಬ್ಬ ಅತ್ಯುತ್ತಮ ಪೋಷಕರಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೀರಿ ಎಂದೇ ಅರ್ಥ. ಈ ಲಕ್ಷಣಗಳನ್ನು ಗುರುತಿಸಿ, ನಿಮ್ಮ ಮಕ್ಕಳೊಂದಿಗೆ ಪ್ರತಿದಿನದ ಸಣ್ಣ ಪುಟ್ಟ ಕ್ಷಣಗಳನ್ನು ಸಂಭ್ರಮಿಸಿ!

Must Read