ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪ್ರದೋಷ್ ನಾಲ್ಕನೇ ದಿನದ ಮಾಫಿ ಸಾಕ್ಷ್ಯ ಹೇಳಲು ತಯಾರಾಗಿದ್ದಾರೆ. ಈಗಾಗಲೇ ಪ್ರದೋಷ್ ನೀಡಿರುವ ಮಾಹಿತಿಯಿಂದ ಜೈಲಿನಲ್ಲಿರುವ ಆರೋಪಿಗಳಿಗೆ ನಡುಕ ಉಂಟಾಗಿದ್ದು, ಇಂದು ಯಾವೆಲ್ಲಾ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ ಎಂದು ಕಾದುನೋಡಬೇಕಿದೆ.
ಇಂದು ಬಹುತೇಕ ಮಾಫಿ ಸಾಕ್ಷ್ಯ ಹೇಳಿಕೆ ಮುಕ್ತಾಯವಾಗುವ ಸಾಧ್ಯತೆ ಇದೆ. ಇದೇ ವೇಳೆ ಕ್ರಾಸ್ ಎಗ್ಸಾಮಿನೇಷನ್ಗೆ ದಿನಾಂಕ ನಿಗದಿಯಾಗಲಿದೆ. ನಿಗದಿತ ದಿನಾಂಕದಂದು ಆರೋಪಿಗಳ ಪರ ವಕೀಲರು ಪ್ರದೋಷ್ನ ಕ್ರಾಸ್ ಎಗ್ಸಾಮಿನೇಷನ್ ನಡೆಸಲಿದ್ದಾರೆ.
ಎವಿಡೆನ್ಸ್ ಆಕ್ಟ್ಗೆ ಸಂಬಂಧಿಸಿದಂತೆ ಇಂದು ಆದೇಶ ಪ್ರಕಟವಾಗಲಿದೆ. ಎವಿಡೆನ್ಸ್ ಆಕ್ಟ್ನ 137, 138ರ ಅಡಿಯಲ್ಲಿ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.ಮಾಫಿ ಸಾಕ್ಷ್ಯ ಹೇಳಿಕೆ ವೇಳೆ ಮರೆತಿದ್ದ ಮಾಹಿತಿಯನ್ನು ಪ್ರದೋಷ್ನಿಂದ ಮಾರನೇ ದಿನ ಮತ್ತೆ ಹೇಳಿಕೆ ದಾಖಲಿಸಲಾಗಿತ್ತು. ಇದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು.
ಪ್ರದೋಷ್ಗೆ ಯಾರೋ ಹೇಳಿಕೊಡುತ್ತಿದ್ದಾರೆ ಇದಕ್ಕಾಗಿಯೇ ಮತ್ತೆ ಮತ್ತೆ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಇದನ್ನು ರೆಕಾರ್ಡ್ ಮಾಡಬಾರದು ಎಂದು ದರ್ಶನ್ ಪರ ವಕೀಲರು ವಾದಿಸಿದ್ದರು. ಎವಿಡೆನ್ಸ್ ಆಕ್ಟ್ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ಇಂದು 59ನೇ ಸೆಷನ್ಸ್ ಕೋರ್ಟ್ ಆದೇಶ ಪ್ರಕಟಿಸಲಿದೆ.



