ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಾಗಲೇ ಹೆಚ್ಚಿದ ಪ್ರಯಾಣ ದರದ ಹೊರೆ ಹೊತ್ತಿರುವ ಕರ್ನಾಟಕದ ಸಾರ್ವಜನಿಕ ಸಾರಿಗೆ ಪ್ರಯಾಣಿಕರಿಗೆ ಮತ್ತೊಂದು ದರ ಏರಿಕೆಯ ಆತಂಕ ಎದುರಾಗಿದೆ.
ಹೌದು! KSRTC, BMTC ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಭಾರೀ ಆರ್ಥಿಕ ನಷ್ಟದಲ್ಲಿರುವ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಪರಿಷ್ಕರಣೆಗೆ ಸರ್ಕಾರ ಚಿಂತನೆ ನಡೆಸಿದೆ. ದರ ನಿಗದಿ ಸಮಿತಿ ತನ್ನ ಶಿಫಾರಸುಗಳನ್ನು ಶೀಘ್ರದಲ್ಲೇ ಸಾರಿಗೆ ಸಚಿವರಿಗೆ ಸಲ್ಲಿಸುವ ನಿರೀಕ್ಷೆಯಿದ್ದು, ಬಳಿಕ ಸಂಪುಟದ ಅನುಮೋದನೆ ಪಡೆದು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ವಾರದಲ್ಲಿ ವರದಿ ಸಲ್ಲಿಸುವ ನಿರೀಕ್ಷೆ
ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ದರ ನಿಗದಿ ಸಮಿತಿ ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿ ಹಾಗೂ ಕಾರ್ಯಾಚರಣಾ ವೆಚ್ಚಗಳನ್ನು ಪರಿಶೀಲಿಸಿದ್ದು, ತನ್ನ ವರದಿಯನ್ನು ಈ ವಾರ ಸಲ್ಲಿಸುವ ನಿರೀಕ್ಷೆಯಿದೆ. ವರದಿ ಆಧರಿಸಿ ದರ ಪರಿಷ್ಕರಣೆಯ ಪ್ರಮಾಣ ಮತ್ತು ಜಾರಿಗೆ ಸಂಬಂಧಿಸಿದ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಬರೋಬ್ಬರಿ 1,527 ಕೋಟಿ ನಷ್ಟ
2025-26ನೇ ಸಾಲಿನಲ್ಲಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಒಟ್ಟಾರೆ ಸುಮಾರು 14,991 ಕೋಟಿ ಆದಾಯ ಗಳಿಸಿದ್ದರೆ, ವೆಚ್ಚ 16,519 ಕೋಟಿಗೆ ತಲುಪಿದೆ. ಪರಿಣಾಮವಾಗಿ ಬರೋಬ್ಬರಿ 1,527 ಕೋಟಿ ನಷ್ಟ ದಾಖಲಾಗಿದೆ. ಕಳೆದ ಮೂರು ವರ್ಷಗಳ ಅಂಕಿ-ಅಂಶಗಳಲ್ಲೂ ಸಾರಿಗೆ ನಿಗಮಗಳ ಮೇಲಿನ ಆರ್ಥಿಕ ಒತ್ತಡ ಮುಂದುವರಿದಿರುವುದು ಗೋಚರಿಸುತ್ತದೆ.
ಇದನ್ನೂ ಓದಿ:
ಡೀಸೆಲ್ ಬೆಲೆ ಏರಿಕೆ
ಇದರ ನಡುವೆ ಡೀಸೆಲ್ ಬೆಲೆ ಏರಿಕೆಯೂ ನಿಗಮಗಳ ಲೆಕ್ಕಾಚಾರವನ್ನು ಮತ್ತಷ್ಟು ಬಿಗಿಗೊಳಿಸಿದೆ. ಕಳೆದ ಏಳು ತಿಂಗಳಲ್ಲಿ ಪ್ರತಿ ಲೀಟರ್ ಡೀಸೆಲ್ ದರ ಸುಮಾರು 8ರಷ್ಟು ಹೆಚ್ಚಾಗಿದ್ದು, ನಾಲ್ಕು ನಿಗಮಗಳ ಮೇಲೆ ತಿಂಗಳಿಗೆ ಹೆಚ್ಚುವರಿಯಾಗಿ ಸುಮಾರು 40 ಕೋಟಿ ಹೊರೆ ಬೀಳುತ್ತಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಇಂಧನ ವೆಚ್ಚ ಸೇರಿದಂತೆ ನಿರ್ವಹಣಾ ಖರ್ಚು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಆರ್ಥಿಕ ನೆರವಿನ ಬೇಡಿಕೆಯೂ ಕೇಳಿಬಂದಿದೆ. ಮತ್ತೊಂದೆಡೆ, ದರ ಏರಿಕೆ ಜಾರಿಯಾದರೆ ಪ್ರತಿದಿನ KSRTC ಮತ್ತು BMTC ಬಸ್‌ಗಳನ್ನು ಅವಲಂಬಿಸುವ ಲಕ್ಷಾಂತರ ಪ್ರಯಾಣಿಕರ ಪ್ರಯಾಣ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ. ಕಳೆದ ವರ್ಷ ಜನವರಿಯಲ್ಲೇ ಟಿಕೆಟ್ ದರವನ್ನು ಸುಮಾರು ಶೇ.15ರಷ್ಟು ಹೆಚ್ಚಿಸಲಾಗಿತ್ತು.



