ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಮಧ್ಯಾಹ್ನದ ನಂತರ ಮತ್ತೆ ಮಳೆರಾಯ ಅಬ್ಬರಿಸಿದ್ದು, ನಗರದ ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಧ್ಯಾಹ್ನದ ವೇಳೆಗೆ ದಟ್ಟ ಮೋಡಗಳು ಆವರಿಸಿ ಏಕಾಏಕಿ ಗುಡುಗು-ಸಿಡಿಲಿನೊಂದಿಗೆ ಭಾರೀ ಮಳೆ ಸುರಿದು, ಕೆಲವೇ ನಿಮಿಷಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು, ತಗ್ಗು ಪ್ರದೇಶಗಳು ಹಾಗೂ ಪ್ರಮುಖ ರಸ್ತೆಗಳಲ್ಲಿನ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ಮೆಜೆಸ್ಟಿಕ್, ಆನಂದರಾವ್ ಸರ್ಕಲ್, ಕೆ.ಆರ್. ಪುರಂ, ಟಿನ್ ಫ್ಯಾಕ್ಟರಿ, ಟಿ.ಸಿ. ಪಾಳ್ಯ, ಜಕ್ಕೂರು ಹಾಗೂ ಹೆಬ್ಬಾಳ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಕೆ.ಆರ್. ಪುರಂ ಮೆಟ್ರೋ ನಿಲ್ದಾಣದ ಸುತ್ತಮುತ್ತ ಹಾಗೂ ಟಿನ್ ಫ್ಯಾಕ್ಟರಿ ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನಗಳ ಟ್ರಾಫಿಕ್ ಜಾಮ್ ಉಂಟಾಯಿತು.
ಇದನ್ನೂ ಓದಿ:
ಇದರ ನಡುವೆ ಗೇಡ್ಡಲಹಳ್ಳಿ ರೈಲ್ವೆ ಸೇತುವೆ ಸಮೀಪ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹವಾಗಿರುವ ಕುರಿತು ಬೆಂಗಳೂರು ಸಂಚಾರ ಪೊಲೀಸರು ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಭಾಗದಿಂದ ಹೆಣ್ಣೂರು ಕಡೆಗೆ ಸಾಗುವ ವಾಹನಗಳ ಸಂಚಾರ ನಿಧಾನಗೊಂಡಿದ್ದು, ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಸೂಚಿಸಲಾಗಿದೆ.
5, 6ರಂದು ಭಾರೀ ಮಳೆ
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ, ಅಕ್ಟೋಬರ್ 5 ಮತ್ತು 6ರಂದು ದಕ್ಷಿಣ ಒಳನಾಡು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು-ಸಿಡಿಲಿನೊಂದಿಗೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲೂ ಮಳೆ ಮುಂದುವರಿಯುವ ನಿರೀಕ್ಷೆಯಿದೆ.
ಒಟ್ಟಿನಲ್ಲಿ, ಬೆಂಗಳೂರಿನಲ್ಲಿ ಮತ್ತೆ ಮಳೆಯ ಅಬ್ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಲಾವೃತ ಪ್ರದೇಶಗಳು ಮತ್ತು ಸಂಚಾರ ದಟ್ಟಣೆ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.



