ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಈ ಬಾರಿ ನವರಾತ್ರಿ ಆಚರಣೆ ವಿಶೇಷ ಭಕ್ತಿ ವೈಭವಕ್ಕೆ ಸಾಕ್ಷಿಯಾಗಲಿದೆ.

ಗಿರಿನಗರದ ಶ್ರೀಮಠದ ಶಾಖೆಯಲ್ಲಿ ಅ. 11ರಿಂದ 21ರವರೆಗೆ ‘ನವರಾತ್ರ ನಮಸ್ಯಾ’ ಹೆಸರಿನಲ್ಲಿ ವಿವಿಧ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಾಲಯ ಉದ್ಘಾಟನೆ
ಕಾರ್ಯಕ್ರಮದ ಕಾರ್ಯಾಲಯವನ್ನು ಬಸವನಗುಡಿ ಶಾಸಕ ಎಲ್.ಎ. ರವಿ ಸುಬ್ರಹ್ಮಣ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನವರಾತ್ರ ಪರ್ವದ ದೇವಿಯ ಆರಾಧನೆಯು ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿರುವುದು ವಿಶೇಷವಾಗಿದ್ದು, ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಸಹಕಾರವಿದೆ, ಬೆಂಗಳೂರಿನ ಮಹಾಜನತೆ ಈ ಅಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಏನೇನಿದೆ ವಿಶೇಷ?
‘ಮಹಾನಗರದಲ್ಲಿ ಮಹಾದೇವಿಯ ಮಹಾರಾಧನೆ’ ಎಂಬ ಆಶಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಾಜರಾಜೇಶ್ವರಿ ದೇವಿಯ ವಿಶೇಷ ಆರಾಧನೆ ನಡೆಯಲಿದೆ. ಒಂಬತ್ತು ದಿನಗಳ ಕಾಲ ಉಪವಾಸ ವ್ರತಾಚರಣೆಯಲ್ಲಿರುವ ಶ್ರೀಗಳು ಪ್ರತಿದಿನ ಶ್ರೀ ರಾಜರಾಜೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದು, ಲಲಿತೋಪಾಖ್ಯಾನದ ಕುರಿತು ಪ್ರವಚನ ನೀಡಲಿದ್ದಾರೆ. ಶ್ರೀದುರ್ಗಾ ಮಂಟಪದಲ್ಲಿ ಮೃಣ್ಮಯ ರಾಜರಾಜೇಶ್ವರಿ ದೇವಿಯ ಪ್ರತಿಷ್ಠಾಪನೆಯೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ.
ನವರಾತ್ರಿ ಅವಧಿಯಲ್ಲಿ ಪ್ರತಿದಿನ ನೂರು ಸಪ್ತಶತೀ ಪಾರಾಯಣದಂತೆ ಒಟ್ಟು ಸಾವಿರ ಪಾರಾಯಣ ನಡೆಯಲಿದ್ದು, ಒಂಬತ್ತು ದಿನಗಳಿಗೆ ಒಂಬತ್ತು ವಿಶೇಷ ಹವನಗಳನ್ನು ಆಯೋಜಿಸಲಾಗಿದೆ. ವಿಜಯದಶಮಿಯಂದು ಶತಚಂಡಿಕಾ ಮಹಾಯಾಗ ನೆರವೇರಲಿದೆ. ಇದರೊಂದಿಗೆ ಪ್ರತಿದಿನ ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಪೂಜೆ, ಸಂಜೆ ದುರ್ಗಾದೀಪ ನಮಸ್ಕಾರ, ಕುಂಕುಮಾರ್ಚನೆ ಹಾಗೂ ಉಡಿಸೇವೆ ನಡೆಯಲಿದೆ. ಭಜನಾ ತಂಡಗಳ ಗಾಯನ ಮತ್ತು ವಿವಿಧ ಕಲಾ ಕಾರ್ಯಕ್ರಮಗಳ ಮೂಲಕವೂ ದೇವಿಯ ಆರಾಧನೆ ನಡೆಯಲಿದೆ.
ಶ್ರೀಗಳವರ ‘ಅನ್ನಂ ಬ್ರಹ್ಮ’ ಸಂದೇಶದ ಆಶಯದಂತೆ ‘ಅನ್ನಬ್ರಹ್ಮ ಸಂಕೀರ್ತನಮ್’ ಎಂಬ ವಿಶಿಷ್ಟ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಭೋಜನವನ್ನು ಕೇವಲ ಆಹಾರ ಸೇವನೆಯಾಗಿ ನೋಡದೆ, ಭಗವಂತನ ಸ್ಮರಣೆಯೊಂದಿಗೆ ನಡೆಸುವ ಆಧ್ಯಾತ್ಮಿಕ ಅನುಭವವನ್ನಾಗಿ ರೂಪಿಸುವುದು ಇದರ ಉದ್ದೇಶವಾಗಿದೆ.
ಅ.21ರಂದು ಬುಧವಾರ ವಿದ್ಯಾದಶಮಿಯಂದು ‘ನವರಾತ್ರ ನಮಸ್ಯಾ’ ಮಹಾಸಮಾರೋಪಗೊಳ್ಳಲಿದ್ದು, ಅಂದು ಶ್ರೀಗಳ ಆಶೀರ್ವಚನ ಹಾಗೂ ಸಾರ್ವಜನಿಕ ಮಂತ್ರಾಕ್ಷತೆ ನಡೆಯಲಿದೆ.



