November 22, 2026
Sunday, November 22, 2026
spot_img

ದೆಹಲಿ ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ನಿಯಮ ಉಲ್ಲಂಘಿಸಿದವರಿಗೆ ಭಾರೀ ದಂಡ, 236ಕ್ಕೆ ಇಳಿದ AQI

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ನಿಯಂತ್ರಿಸಲು ದೆಹಲಿ ಸರ್ಕಾರ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳ ಪರಿಣಾಮವಾಗಿ ನಗರದ ವಾಯು ಗುಣಮಟ್ಟದಲ್ಲಿ ತುಸು ಸುಧಾರಣೆ ಕಂಡುಬಂದಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಮಾಹಿತಿಯ ಪ್ರಕಾರ, ಶನಿವಾರ ಸಂಜೆ 265 ಇದ್ದ ವಾಯು ಗುಣಮಟ್ಟ ಸೂಚ್ಯಂಕ (AQI), ಭಾನುವಾರ ಬೆಳಿಗ್ಗೆ 7 ಗಂಟೆಗೆ 236ಕ್ಕೆ ಇಳಿಕೆಯಾಗಿದೆ. ಸೂಚ್ಯಂಕದಲ್ಲಿ ಅಲ್ಪ ಇಳಿಕೆಯಾಗಿದ್ದರೂ, ದೆಹಲಿಯ ಗಾಳಿಯ ಗುಣಮಟ್ಟ ಇನ್ನೂ ‘ಕಳಪೆ’ (Poor) ವಿಭಾಗದಲ್ಲೇ ಮುಂದುವರಿದಿದೆ.

ನಿಯಮ ಉಲ್ಲಂಘಿಸಿದವರಿಗೆ 2.65 ಕೋಟಿ ದಂಡ

ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಕಾರ್ಯಾಚರಣೆ ನಡೆಸುತ್ತಿದ್ದು, ನವೆಂಬರ್ 1 ರಿಂದ 17 ರವರೆಗೆ ನಗರದಾದ್ಯಂತ ಸುಮಾರು 8,874 ನಿರ್ಮಾಣ ಮತ್ತು ನೆಲಸಮ ಸ್ಥಳಗಳ ಮೇಲೆ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿದ 554 ಸ್ಥಳಗಳನ್ನು ಪತ್ತೆಹಚ್ಚಲಾಗಿದೆ. ನಿಯಮ ಉಲ್ಲಂಘಿಸಿದವರಿಗೆ ಒಟ್ಟು 2.65 ಕೋಟಿಗೂ ಹೆಚ್ಚು ಪರಿಸರ ಪರಿಹಾರ ದಂಡವನ್ನು ವಿಧಿಸಲಾಗಿದೆ. ಅಲ್ಲದೆ, ತೀವ್ರ ಉಲ್ಲಂಘನೆ ಕಂಡುಬಂದ 112 ನಿರ್ಮಾಣ ಸ್ಥಳಗಳನ್ನು ತಕ್ಷಣವೇ ಮುಚ್ಚಲು ಆದೇಶಿಸಲಾಗಿದ್ದು, 462 ಸ್ಥಳಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ.

ಮುಖ್ಯಮಂತ್ರಿಗಳ ಖಡಕ್ ಸೂಚನೆ

ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದು, ಕಳೆದ ದಶಕಕ್ಕೆ ಹೋಲಿಸಿದರೆ ಈ ನವೆಂಬರ್‌ನಲ್ಲಿ ಮಾಲಿನ್ಯದಲ್ಲಿ ಕೊಂಚ ಸುಧಾರಣೆ ಕಂಡುಬಂದಿದ್ದರೂ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಿರ್ಮಾಣ ಸ್ಥಳಗಳಲ್ಲಿ ಹಸಿರು ಪರದೆ ಮತ್ತು ಬ್ಯಾರಿಕೇಡ್‌ಗಳನ್ನು ಕೇವಲ ಕಾಟಾಚಾರಕ್ಕೆ ಅಳವಡಿಸದೆ, ಸರಿಯಾದ ರೀತಿಯಲ್ಲಿ ಧೂಳು ನಿಯಂತ್ರಿಸುವಂತೆ ಸೂಚಿಸಿದ್ದಾರೆ. ರಸ್ತೆಗಳ ಧೂಳು ತಡೆಯಲು ಯಾಂತ್ರೀಕೃತ ಸ್ವೀಪಿಂಗ್ ಯಂತ್ರಗಳ ಬಳಕೆ ಹಾಗೂ ನೀರು ಸಿಂಪಡಣೆಯನ್ನು ತೀವ್ರಗೊಳಿಸಲು ದೆಹಲಿ ಮಹಾನಗರ ಪಾಲಿಕೆ (MCD) ಮತ್ತು ಲೋಕೋಪಯೋಗಿ ಇಲಾಖೆಗೆ (PWD) ಆದೇಶಿಸಲಾಗಿದೆ. ಪ್ರಸ್ತುತ ಇರುವ 108 ಯಂತ್ರಗಳ ಜೊತೆಗೆ ಹೆಚ್ಚುವರಿಯಾಗಿ 70 ಸ್ವೀಪಿಂಗ್ ಯಂತ್ರಗಳನ್ನು ನಿಯೋಜಿಸಲಾಗುತ್ತಿದೆ.

ವಿವಿಧ ಇಲಾಖೆಗಳಿಗೆ ಬಂದಿದ್ದ 68,137 ದೂರುಗಳ ಪೈಕಿ ಈಗಾಗಲೇ 61,507 ದೂರುಗಳನ್ನು ಬಗೆಹರಿಸಲಾಗಿದ್ದು, ಬಾಕಿ ಇರುವ ಗುಂಡಿ ಬಿದ್ದ ರಸ್ತೆಗಳ ದೂರುಗಳನ್ನು ಶೀಘ್ರವೇ ಇತ್ಯರ್ಥಪಡಿಸುವಂತೆ ಸಿಎಂ ಸೂಚಿಸಿದ್ದಾರೆ.

ವಿವಿಧ ಪ್ರದೇಶಗಳ AQI ವಿವರ

ನಗರದ ಚಾಂದಿನಿ ಚೌಕ್‌ನಲ್ಲಿ ಅತಿ ಹೆಚ್ಚು ಅಂದರೆ 304 AQI ದಾಖಲಾಗಿದ್ದು, ‘ಅತ್ಯಂತ ಕಳಪೆ’ ಸ್ಥಿತಿಯಲ್ಲಿದೆ. ಪಂಜಾಬಿ ಬಾಗ್ (298), ಬವಾನಾ (267), ರೋಹಿಣಿ (260) ಮತ್ತು ಆನಂದ್ ವಿಹಾರ್ (251) ಪ್ರದೇಶಗಳಲ್ಲಿ ಗಾಳಿ ‘ಕಳಪೆ’ ಮಟ್ಟದಲ್ಲಿದೆ. ಆದರೆ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣ (146), ಅಲಿಪುರ (178) ಮತ್ತು ವಸುಂಧರಾ ಎನ್‌ಕ್ಲೇವ್ (198) ಸೇರಿದಂತೆ ಐದು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ‘ಮಧ್ಯಮ’ ಮಟ್ಟಕ್ಕೆ ಸುಧಾರಿಸಿದೆ

Must Read

Skip to toolbar