ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ‘ಸುಲ್ತಾನ್’ ಸಲ್ಮಾನ್ ಖಾನ್ ಸುತ್ತಲೂ ಇಂದು ಹದ್ದಿನ ಕಣ್ಣಿನ ಕಾವಲಿದೆ. ಸರ್ಕಾರದ ಉನ್ನತ ಮಟ್ಟದ ಭದ್ರತೆ ಹಾಗೂ ಖಾಸಗಿ ಅಂಗರಕ್ಷಕರ ದೊಡ್ಡ ಪಡೆಯೇ ಅವರನ್ನು ಹಗಲಿರುಳು ಕಾಯುತ್ತಿದೆ. ಆದರೆ, ಈ ಅಭೇದ್ಯ ಕೋಟೆಯೊಳಗಿದ್ದರೂ ತಾವು ಇಂದಿಗೂ ನಿರಂತರ ಭಯ ಮತ್ತು ಆತಂಕದ ನೆರಳಲ್ಲೇ ಬದುಕುತ್ತಿರುವುದಾಗಿ ಸಲ್ಮಾನ್ ಖಾನ್ ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ತಮ್ಮ ಮುಂಬರುವ ಯುದ್ಧ ಆಧಾರಿತ ಸಿನಿಮಾ ‘ಮಾತೃಭೂಮಿ’ ಪ್ರಚಾರ ಕಾರ್ಯಕ್ರಮಕ್ಕಾಗಿ ಹೈದರಾಬಾದ್‌ಗೆ ಆಗಮಿಸಿದ್ದ ವೇಳೆ ಸಲ್ಮಾನ್ ಈ ಮಾತುಗಳನ್ನಾಡಿದ್ದಾರೆ. ಸುತ್ತಲೂ ಎಷ್ಟೇ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಇದ್ದ ಮಾತ್ರಕ್ಕೆ, ಯಾವ ಕ್ಷಣದಲ್ಲಿ ಯಾವ ಅನಾಹುತ ಸಂಭವಿಸಬಹುದು ಎಂಬ ಆತಂಕ ಮನಸ್ಸಿನಿಂದ ದೂರವಾಗುವುದಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
ನಿಜ ಜೀವನದಲ್ಲಿ ಭಾರೀ ಭದ್ರತೆಯ ನಡುವೆ ಬದುಕುವವರು ಪ್ರತಿಕ್ಷಣವೂ ಒತ್ತಡದಲ್ಲಿರುತ್ತಾರೆ ಎಂದ ಸಲ್ಮಾನ್, ತಮ್ಮ ಈ ಪರಿಸ್ಥಿತಿಯನ್ನು ದೇಶ ಕಾಯುವ ಸೈನಿಕರ ಕುಟುಂಬಗಳಿಗೆ ಹೋಲಿಸಿದರು. “ನಮ್ಮ ಪ್ರೀತಿಪಾತ್ರರು ಗಡಿಯಲ್ಲಿ ಕಾಯುತ್ತಿರುವಾಗ, ಮನೆಯಲ್ಲಿರುವ ಅವರ ಪತ್ನಿಯರು, ಸಹೋದರರು ಮತ್ತು ಹೆಣ್ಣುಮಕ್ಕಳು ಪ್ರತಿದಿನ ಎಂತಹ ಆತಂಕ ಹಾಗೂ ಭಯವನ್ನು ಅನುಭವಿಸುತ್ತಾರೆ ಎಂಬುದನ್ನು ನಾವು ಕೇವಲ ಊಹಿಸಿಕೊಳ್ಳಲು ಮಾತ್ರ ಸಾಧ್ಯ,” ಎಂದು ಭಾವುಕರಾಗಿ ನುಡಿದರು.
ಸುಮಾರು ಎರಡು ದಶಕಗಳ ಹಿಂದಿನ ಕೃಷ್ಣಮೃಗ ಬೇಟೆ ಪ್ರಕರಣದ ಬಳಿಕ ಸಲ್ಮಾನ್ ಖಾನ್, ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ತಂಡದ ಹಿಟ್ ಲಿಸ್ಟ್‌ನಲ್ಲಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಸಲ್ಮಾನ್ ಹತ್ಯೆಗೆ ಹಲವು ಬಾರಿ ಸಂಚು ರೂಪಿಸಲಾಗಿದ್ದು, ಅವರ ಆಪ್ತರ ಮೇಲೂ ದಾಳಿಗಳು ನಡೆದಿವೆ. ಅದರಲ್ಲೂ 2024ರ ಏಪ್ರಿಲ್‌ನಲ್ಲಿ ಮುಂಬೈನ ಬಾಂದ್ರಾದಲ್ಲಿರುವ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ನಿವಾಸದ ಹೊರಗೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು ಇಡೀ ಚಿತ್ರರಂಗವನ್ನೇ ಬೆಚ್ಚಿಬೀಳಿಸಿತ್ತು.
ಈ ಘಟನೆಯ ನಂತರ ಸರ್ಕಾರ ಸಲ್ಮಾನ್ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದರೂ, ಸುತ್ತಮುತ್ತಲಿನ ಬೆಳವಣಿಗೆಗಳು ನಟನ ಮನಸ್ಸಿನಲ್ಲಿ ಆಳವಾದ ಆತಂಕವನ್ನು ಉಳಿಸಿರುವುದು ಅವರ ಇತ್ತೀಚಿನ ಮಾತುಗಳಿಂದ ಸ್ಪಷ್ಟವಾಗಿದೆ.



