ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಪಕ್ಷಗಳು ನಡೆಸುತ್ತಿರುವ ಬೃಹತ್ ಪ್ರತಿಭಟನೆ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರತಿಭಟನೆ ಹತ್ತಿಕ್ಕಲು ತಮ್ಮ ವಿರುದ್ಧ ದಾಖಲಾಗುತ್ತಿರುವ ಪೊಲೀಸ್ ಪ್ರಕರಣಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಗುಡುಗಿರುವ ಅವರು, ‘ಈಗಾಗಲೇ ನನ್ನ ಮೇಲೆ 45 ಎಫ್ಐಆರ್ಗಳಿವೆ, ಅದನ್ನು 100ಕ್ಕೆ ತಲುಪಿಸುವುದೇ ನನ್ನ ಗುರಿ. ದೇಶದ ಪ್ರಜಾಪ್ರಭುತ್ವ ರಕ್ಷಣೆಗಾಗಿ ಬೀದಿಗಿಳಿದಾಗ ದಾಖಲಾಗುವ ಪ್ರತಿಯೊಂದು ಎಫ್ಐಆರ್ ಕೂಡ ನನಗೆ ದೇಶಕ್ಕಾಗಿ ಸಿಕ್ಕ ಗೌರವದ ಪದಕವಿದ್ದಂತೆ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಪಕ್ಷಗಳ ಸಂಸದರ ವಶ
ಚುನಾವಣಾ ಆಯುಕ್ತರನ್ನು ಭೇಟಿಯಾಗಲು ತೆರಳುತ್ತಿದ್ದ ಪ್ರತಿಪಕ್ಷಗಳ ಸಂಸದರನ್ನು ಪೊಲೀಸರು ದೆಹಲಿಯಲ್ಲಿ ತಡೆದಿದ್ದರು. ಇದಾದ ಬಳಿಕ ಧರಣಿ ನಡೆಸಿದ್ದ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ʼನಮಗೆ ಅಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡದ ಕಾರಣ, ಈಗ ನಾವು ಅಧಿಕೃತ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್ನಲ್ಲಿ ನಮ್ಮ ಹೋರಾಟವನ್ನು ಮುಂದುವರಿಸುತ್ತಿದ್ದೇವೆʼ ಎಂದು ತಿಳಿಸದ್ದಾರೆ.
ಖರ್ಗೆ ನಿವಾಸದಲ್ಲಿ ಮುಂದಿನ ಹೋರಾಟದ ತಂತ್ರ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಪ್ರತಿಪಕ್ಷಗಳ ಪ್ರಮುಖ ಸಭೆಯಲ್ಲಿ ಮುಂದಿನ ಕಾನೂನು ಹೋರಾಟ ಹಾಗೂ ಮುಖ್ಯ ಚುನಾವಣಾ ಆಯುಕ್ತರಿಗೆ ಬರೆಯಬೇಕಾದ ಜಂಟಿ ಪತ್ರದ ರೂಪುರೇಷೆಗಳನ್ನು ಅಂತಿಮಗೊಳಿಸಲಾಗಿದೆ. ಮತದಾರರ ಪಟ್ಟಿ ಅಕ್ರಮದ ವಿರುದ್ಧ ದೇಶಾದ್ಯಂತ ಒಗ್ಗಟ್ಟಿನಿಂದ ಬೃಹತ್ ಆಂದೋಲನವನ್ನು ಮುಂದುವರಿಸಲು ವಿರೋಧ ಪಕ್ಷಗಳು ನಿರ್ಧರಿಸಿವೆ.



