October 8, 2026
Thursday, October 8, 2026
spot_img

ಹಬ್ಬದ ಸಂಭ್ರಮಕ್ಕೆ ಕಲಬೆರಕೆ ಕಾಟ ಬೇಡ: ದೇಶಾದ್ಯಂತ ಹಾಲು–ಸಿಹಿತಿಂಡಿಗಳ ಮೇಲೆ ಕಣ್ಣಿಟ್ಟ FSSAI ಅಧಿಕಾರಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಲು ಸಾಲು ಹಬ್ಬಗಳ ಸಂಭ್ರಮಾಚರಣೆಗೆ ದಿನಗಣನೆ ಶುರುವಾಗುತ್ತಿದಂತೆ ದೇಶಾದ್ಯಂತ ಆಹಾರ ಕಲಬೆರಕೆ ವಿರುದ್ಧ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಹಬ್ಬದ ದಿನಗಳಲ್ಲಿ ಹಾಲು, ಸಿಹಿತಿಂಡಿ, ಖಾರ ಪದಾರ್ಥಗಳು ಸೇರಿದಂತೆ ಆಹಾರ ಉತ್ಪನ್ನಗಳ ಬೇಡಿಕೆ ಹೆಚ್ಚುವ ಹಿನ್ನೆಲೆಯಲ್ಲಿ ಕಲಬೆರಕೆ ಮತ್ತು ಕಳಪೆ ಗುಣಮಟ್ಟದ ಆಹಾರ ಮಾರುಕಟ್ಟೆಗೆ ಪ್ರವೇಶಿಸದಂತೆ ತಡೆಯಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತುರ್ತು ನಿರ್ದೇಶನ ನೀಡಿದೆ.

ಹೆಚ್ಚು ಬಳಕೆಯಾಗುವ ಆಹಾರ ಪದಾರ್ಥಗಳ ಪರಿಶೀಲನೆ

ಈ ವಿಶೇಷ ಕಾರ್ಯಾಚರಣೆಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳು, ಸಾಂಪ್ರದಾಯಿಕ ಸಿಹಿತಿಂಡಿಗಳು, ಸ್ನ್ಯಾಕ್ಸ್, ನಮ್ಕೀನ್, ಪಾಪಡ್, ಫ್ರೈಯಮ್ಸ್, ಅಡುಗೆ ಎಣ್ಣೆ, ತುಪ್ಪ ಹಾಗೂ ಪ್ಯಾಕೇಜ್ಡ್ ಪಾನೀಯಗಳ ಮೇಲೆ ವಿಶೇಷ ನಿಗಾ ಇರಲಿದೆ. ಸ್ಥಳೀಯವಾಗಿ ಹೆಚ್ಚು ಬಳಕೆಯಾಗುವ ಆಹಾರ ಪದಾರ್ಥಗಳನ್ನೂ ಪರಿಶೀಲನೆ ವ್ಯಾಪ್ತಿಗೆ ತರಲು ರಾಜ್ಯ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇದನ್ನೂ ಓದಿ:

ಜನಸಂದಣಿ ಮಾರುಕಟ್ಟೆಗಳಲ್ಲಿ ತಪಾಸಣೆ ತೀವ್ರ

ಹೆಚ್ಚಿನ ಜನಸಂದಣಿ ಇರುವ ಮಾರುಕಟ್ಟೆಗಳು, ಸಗಟು ವ್ಯಾಪಾರ ಕೇಂದ್ರಗಳು, ಆಹಾರ ಉತ್ಪಾದನಾ ಘಟಕಗಳು ಹಾಗೂ ಸರಕು ಸಾಗಣೆ ಕೇಂದ್ರಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗುತ್ತಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ಸ್ಥಳದಲ್ಲೇ ಪರಿಶೀಲನೆ ನಡೆಸುವುದರ ಜೊತೆಗೆ ಅನುಮಾನಾಸ್ಪದ ಉತ್ಪನ್ನಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಲಿದ್ದಾರೆ.

ಏನಿದು Food Safety on Wheels?

ಇದರ ಜೊತೆಗೆ ತಕ್ಷಣದ ಪರೀಕ್ಷೆ ನಡೆಸಲು ‘Food Safety on Wheels’ ಎಂಬ ಮೊಬೈಲ್ ಆಹಾರ ಪರೀಕ್ಷಾ ಪ್ರಯೋಗಾಲಯಗಳನ್ನೂ ಪ್ರಮುಖ ಮಾರುಕಟ್ಟೆ ಪ್ರದೇಶಗಳಿಗೆ ನಿಯೋಜಿಸಲಾಗುತ್ತಿದೆ. ಇದರಿಂದ ಆಹಾರದ ಗುಣಮಟ್ಟ, ಕಲಬೆರಕೆ ಹಾಗೂ ಸ್ವಚ್ಛತಾ ಮಾನದಂಡಗಳನ್ನು ಸ್ಥಳದಲ್ಲೇ ಪರಿಶೀಲಿಸುವ ಅವಕಾಶ ದೊರೆಯಲಿದೆ.

ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ರಾಜ್ಯಗಳ ಆಹಾರ ಸುರಕ್ಷತಾ ಇಲಾಖೆಗಳು ನಡೆಸಿದ ತಪಾಸಣೆ, ಮಾದರಿ ಸಂಗ್ರಹ ಮತ್ತು ಪ್ರಯೋಗಾಲಯ ಪರೀಕ್ಷೆಗಳ ಫಲಿತಾಂಶಗಳನ್ನು FoSCoS ಮತ್ತು FoSCoRIS ಪೋರ್ಟಲ್‌ಗಳಲ್ಲಿ ದಾಖಲಿಸುವಂತೆ ಸೂಚಿಸಲಾಗಿದೆ.

ಇತ್ತೀಚೆಗೆ ಅಸುರಕ್ಷಿತ ಮಾದರಿ ಪತ್ತೆಯಾದ ಹಿನ್ನೆಲೆಯಲ್ಲಿ ಕೆಲವು ಆಹಾರ ಉತ್ಪನ್ನಗಳ ವಿರುದ್ಧ ಕ್ರಮ ಕೈಗೊಂಡಿರುವ ಘಟನೆಗಳ ಬೆನ್ನಲ್ಲೇ ಈ ರಾಷ್ಟ್ರವ್ಯಾಪಿ ಕಾರ್ಯಾಚರಣೆ ಮಹತ್ವ ಪಡೆದಿದೆ.

Must Read