ಹೊಸದಿಗಂತ ವರದಿ ದಾವಣಗೆರೆ:
ಆನ್ ಲೈನ್ ಫ್ರೀ ಫೈರ್ ಗೇಮ್ ಐಡಿ ಆಸೆಗೆ ಬಿದ್ದು, ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ 13 ವರ್ಷದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಟಿ.ಆರ್.ಮನೋಜ್ ಮೃತ ದುರ್ದೈವಿ. ಗ್ರಾಮದ ಮನು ಸೇರಿದಂತೆ ಇತರೆ ಐವರು ಸ್ನೇಹಿತರು ಮನೋಜ್ ಗೆ ಫ್ರೀ ಫೈರ್ ಗೇಮ್ ನ 105ನೇ ಲೆವೆಲ್ ಐಡಿ ನೀಡುವುದಾಗಿ ಆಸೆ ತೋರಿಸಿದ್ದರು. ಇದಕ್ಕಾಗಿ ಮೊದಲು 6,000 ರೂ. ಪಡೆದಿದ್ದ ಆರೋಪಿಗಳು, ನಂತರ ಹಂತ-ಹಂತವಾಗಿ ಮನೆಯ ತಿಜೋರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಪಡೆದುಕೊಂಡಿದ್ದರು. ಮನೆಯ ತಿಜೋರಿಯ ಒಂದು ಕೀಲಿ ಕೈ ಇಟ್ಟುಕೊಂಡಿದ್ದ ಮನೋಜ್, ಪೋಷಕರಿಗೆ ತಿಳಿಯದಂತೆ ಸುಮಾರು 4 ಲಕ್ಷ ರೂ. ನಗದು ಹಾಗೂ ತಂದೆ-ತಾಯಿಯ ಮೊಬೈಲ್ ನಿಂದ 11,000 ರೂ. ಫೋನ್ ಪೇ ಮೂಲಕ ವರ್ಗಾವಣೆ ಮಾಡಿದ್ದ. ಹಣ ಕೊಡದಿದ್ದರೆ ನಿನ್ನನ್ನು ಹಾಗೂ ನಿನ್ನ ಅಣ್ಣನನ್ನು ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ.
ವಿಚಾರ ತಿಳಿದ ಪೋಷಕರು ಧೈರ್ಯ ತುಂಬಿದ್ದರೂ, ಬುಧವಾರ ಸಂಜೆ ಯಾರೂ ಇಲ್ಲದ ವೇಳೆ ಮನೋಜ್ ಫ್ಯಾನ್ ಗೆ ಪಂಚೆಯಿಂದ ನೇಣು ಬಿಗಿದುಕೊಂಡಿದ್ದಾನೆ. ಈ ಸಂಬಂಧ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕನ ಆತ್ಮಹತ್ಯೆಗೆ ಕಾರಣರಾದ ಮನು, ಬೊಮ್ಮಲಿಂಗ, ಮಣಿ, ಸಂಜು ಹಾಗೂ ಯಶವಂತ್ ಅವರುಗಳನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಮಕ್ಕಳ ಕೈಗೆ ಮೊಬೈಲ್ ಕೊಡುವಾಗ ಪೋಷಕರು ಎಚ್ಚರಿಕೆಯಿಂದ ಇರಬೇಕು. ಆನಲೈನ್ ಗೇಮಿಂಗ್ ಹುಚ್ಚಿಗೆ ಬೀಳದಂತೆ ಗಮನ ಹರಿಸಬೇಕು ಎಂದು ಬಾಲಕನ ಪೋಷಕರು ಮತ್ತು ಗ್ರಾಮಸ್ಥರು ಮನವಿ ಮಾಡಿದ್ದಾರೆ.



