ಮೈಕೊರೆಯುವ ಚಳಿಗಾಲ ಶುರುವಾಗುತ್ತಿದ್ದಂತೆಯೇ ದೇಹದಲ್ಲಿ ಜಡತ್ವ, ಶೀತ, ಕೆಮ್ಮು ಮತ್ತು ಕೀಲುನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಈ ಋತುವಿನಲ್ಲಿ ನಮ್ಮ ಅಡುಗೆಮನೆಯ ಪುಟ್ಟ ಕಾಳು ಎಳ್ಳು ಆರೋಗ್ಯಕ್ಕೆ ಅಮೃತದಂತೆ ಕೆಲಸ ಮಾಡುತ್ತದೆ. ಬಿಳಿ ಎಳ್ಳಾಗಲಿ ಅಥವಾ ಕಪ್ಪು ಎಳ್ಳಾಗಲಿ, ಅದರಲ್ಲಿರುವ ಪೋಷಕಾಂಶಗಳು ಚಳಿಗಾಲದ ಅನೇಕ ತೊಂದರೆಗಳನ್ನು ದೂರವಿಡಲು ನೆರವಾಗುತ್ತವೆ.
ದೇಹಕ್ಕೆ ಬಿಸಿ
ಚಳಿಗಾಲದಲ್ಲಿ ದೇಹದ ಉಷ್ಣತೆ ಕಡಿಮೆಯಾಗಿ ಸುಸ್ತು ಕಾಣಿಸಿಕೊಳ್ಳುವುದು ಸಾಮಾನ್ಯ. ಎಳ್ಳಿನಲ್ಲಿರುವ ಆರೋಗ್ಯಕರ ಕೊಬ್ಬು ಮತ್ತು ಪೋಷಕಾಂಶಗಳು ದೇಹಕ್ಕೆ ಸ್ಥಿರವಾದ ಶಕ್ತಿ ನೀಡಿ, ಚಳಿಯನ್ನು ಎದುರಿಸಲು ನೆರವಾಗುತ್ತವೆ. ಬೆಳಗಿನ ಉಪಾಹಾರದಲ್ಲಿ ಅಥವಾ ಮಧ್ಯಾಹ್ನದ ಊಟದಲ್ಲಿ ಸ್ವಲ್ಪ ಪ್ರಮಾಣದ ಎಳ್ಳು ಸೇರಿಸುವುದರಿಂದ ದಿನವಿಡೀ ಲವಲವಿಕೆ ಇರುತ್ತದೆ.
ಮೂಳೆ, ಕೀಲುಗಳಿಗೆ ಆಸರೆ
ಚಳಿಯ ವಾತಾವರಣದಲ್ಲಿ ಕೀಲು ನೋವು ಮತ್ತು ಮೂಳೆಗಳ ಬಿಗಿತ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಎಳ್ಳಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಅಂಶ ಹೇರಳವಾಗಿದೆ. ಇವು ಮೂಳೆಗಳನ್ನು ಗಟ್ಟಿಯಾಗಿಸಿ, ದೈನಂದಿನ ಚಲನವಲನವನ್ನು ಸುಲಭವಾಗಿಸಲು ಸಹಕರಿಸುತ್ತವೆ. ವಿಶೇಷವಾಗಿ ಬೆಳೆಯುವ ಮಕ್ಕಳು ಮತ್ತು ಹಿರಿಯರಿಗೆ ಇದು ಉಪಯುಕ್ತ.
ನೈಸರ್ಗಿಕ ರಕ್ಷಣೆ
ಚಳಿಗಾಲದ ಶುಷ್ಕ ಗಾಳಿಗೆ ಚರ್ಮ ಒಣಗಿ, ಬಿರುಕು ಬಿಡುವುದು ಹಲವರ ಸಮಸ್ಯೆ. ಎಳ್ಳಿನಲ್ಲಿರುವ ಪೋಷಕಾಂಶಗಳು ಮತ್ತು ಎಣ್ಣೆಯಂಶ ಚರ್ಮಕ್ಕೆ ಒಳಗಿನಿಂದ ತೇವಾಂಶ ನೀಡಿ, ಮೃದುವಾಗಿಡಲು ನೆರವಾಗುತ್ತವೆ. ಜೀರ್ಣಕ್ರಿಯೆಯನ್ನು ಸುಧಾರಿಸಿ ಹೊಟ್ಟೆಯ ಆರೋಗ್ಯವನ್ನೂ ಕಾಪಾಡುತ್ತವೆ.
ಎಳ್ಳು ಪೌಷ್ಟಿಕವಾಗಿದ್ದರೂ ಅದನ್ನು ಅತಿಯಾಗಿ ಸೇವಿಸಬಾರದು. ದಿನಕ್ಕೆ ಒಂದು ಅಥವಾ ಎರಡು ಚಮಚದಷ್ಟು ಮಿತ ಪ್ರಮಾಣದಲ್ಲಿ ಬಳಸುವುದು ಒಳ್ಳೆಯದು. ವಿಶೇಷ ಆರೋಗ್ಯ ಸಮಸ್ಯೆಗಳು ಅಥವಾ ಅಲರ್ಜಿ ಇರುವವರು ವೈದ್ಯರ ಸಲಹೆ ಪಡೆದು ಸೇವಿಸುವುದು ಸುರಕ್ಷಿತ. ಒಟ್ಟಿನಲ್ಲಿ, ಸರಳ ಆಹಾರ ಕ್ರಮದೊಂದಿಗೆ ಎಳ್ಳನ್ನು ಸೇರಿಸಿಕೊಂಡರೆ ಚಳಿಗಾಲವನ್ನು ಆರೋಗ್ಯವಾಗಿ ಮತ್ತು ಉಲ್ಲಾಸದಿಂದ ಕಳೆಯಬಹುದು.



