November 24, 2026
Tuesday, November 24, 2026
spot_img

ಒತ್ತಾಯಕ್ಕೆ ಮಣಿಯುವ ಜಾಯಮಾನ ನನ್ನದಲ್ಲ: ಶ್ರುತಿ ಹಾಸನ್ ಖಡಕ್ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾ ಬಿಡುಗಡೆಯಾಗಿ ಐದು ತಿಂಗಳು ಕಳೆದರೂ, ಸಿನಿಮಾದ ಸುತ್ತಲಿನ ವಿವಾದ ಮಾತ್ರ ಇನ್ನೂ ತಣ್ಣಗಾಗಿಲ್ಲ. ಚಿತ್ರದಲ್ಲಿ ಜಾನ್ವಿ ಕಪೂರ್ ಅವರ ಪಾತ್ರವನ್ನು ತೋರಿಸಿದ ರೀತಿ ಮತ್ತು ಮಹಿಳೆಯರ ಘನತೆಗೆ ಧಕ್ಕೆ ತಂದಿದೆ ಎಂಬ ಆರೋಪದ ಮೇಲೆ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಈ ನಡುವೆ ಚಿತ್ರದ ‘ಹೆಲ್ಲಲ್ಲಲ್ಲೋ’ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದ ನಟಿ ಶ್ರುತಿ ಹಾಸನ್, ವಿಶೇಷ ಹಾಡುಗಳ ಹಿಂದಿನ ತಮ್ಮ ನಿಲುವನ್ನು ನೇರವಾಗಿ ಮತ್ತು ಸ್ಪಷ್ಟವಾಗಿ ಹಂಚಿಕೊಂಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಶ್ರುತಿ ಹಾಸನ್, ವಿಶೇಷ ಹಾಡುಗಳಲ್ಲಿ ನಟಿಸುವುದರ ಹಿಂದಿನ ತಮ್ಮ ಮನಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ನೃತ್ಯ ಮಾಡುವುದು ಮತ್ತು ಸುಂದರವಾಗಿ ಸಜ್ಜಾಗುವುದು ತನಗೆ ತುಂಬಾ ಇಷ್ಟ ಎಂದು ಹೇಳಿರುವ ಅವರು, ತಮ್ಮ ದೃಷ್ಟಿಕೋನದಲ್ಲಿ ನೃತ್ಯ ಎನ್ನುವುದು ಸ್ವಾತಂತ್ರ್ಯದ ಸಂಕೇತ ಎಂದು ಬಣ್ಣಿಸಿದ್ದಾರೆ. ಯಾರನ್ನೋ ಮೆಚ್ಚಿಸಲು ಅಥವಾ ಯಾರ ಒತ್ತಾಯಕ್ಕೂ ಮಣಿದು ತಾನು ಇಂತಹ ಹಾಡುಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಚಿತ್ರೀಕರಣದ ವೇಳೆ ತಮ್ಮ ಇಷ್ಟ-ಕಷ್ಟಗಳ ವಿಚಾರದಲ್ಲಿ ತಾವು ಎಂದಿಗೂ ರಾಜಿಯಾಗುವುದಿಲ್ಲ ಎಂದು ಶ್ರುತಿ ಹೇಳಿದ್ದಾರೆ. ಯಾವುದೇ ಉಡುಪು ಅಥವಾ ದೃಶ್ಯ ತನಗೆ ಸರಿ ಎನಿಸದಿದ್ದರೆ ತಕ್ಷಣ ನಿರಾಕರಿಸುವುದಾಗಿ ತಿಳಿಸಿದ್ದಾರೆ. ಈ ಕಾರಣದಿಂದ ಸೆಟ್‌ನಲ್ಲಿ ಹಲವು ಬಾರಿ ವಾದಗಳೂ ನಡೆದಿದ್ದು, ಜನರು ತಮ್ಮನ್ನು ಹಠಮಾರಿ ಎಂದು ಕರೆದದ್ದೂ ಇದೆ. ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ತನಗೆ ಆರಾಮದಾಯಕ ಎನಿಸಿದರೆ ಮಾತ್ರ ಆ ಕೆಲಸ ಮಾಡುವುದಾಗಿ ಖಡಕ್ ಆಗಿ ಹೇಳಿದ್ದಾರೆ.

ಸಿನಿಮಾದಲ್ಲಿ ಮಹಿಳೆಯರ ಚಿತ್ರಣದ ಕುರಿತು ನಡೆಯುತ್ತಿರುವ ಚರ್ಚೆ ತಮಗೆ ಅರ್ಥವಾಗುತ್ತದೆ ಎಂದ ಶ್ರುತಿ, ಕೇವಲ ವಿಶೇಷ ಹಾಡುಗಳಲ್ಲಿ ಮಾತ್ರ ಅತಿಯಾದ ಪ್ರದರ್ಶನವಿದೆ ಎನ್ನುವುದು ಸರಿಯಲ್ಲ ಎಂದಿದ್ದಾರೆ. ಇಂದಿನ ಕಾಲದಲ್ಲಿ ಹಲವು ರೂಪಗಳಲ್ಲಿ ಜನರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದ್ದು, ಯಾವುದನ್ನು ಆರಿಸಿಕೊಳ್ಳಬೇಕು ಎಂಬುದು ನಮ್ಮ ವಿವೇಚನೆಗೆ ಬಿಟ್ಟಿದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಜಾನ್ವಿ ಕಪೂರ್ ಅವರ ಅನುಭವದ ಬಗ್ಗೆ ಮಾತನಾಡಲು ಶ್ರುತಿ ನಿರಾಕರಿಸಿದ್ದಾರೆ. ಇತ್ತೀಚೆಗೆ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಜಾನ್ವಿ ಕಪೂರ್, ‘ಪೆದ್ದಿ’ ಚಿತ್ರದ ತಮ್ಮ ಪಾತ್ರ ಸಮಾಜದ ಮೇಲೆ ನಕಾರಾತ್ಮಕ ಪ್ರಭಾವ ಬೀರುವಂತಿತ್ತು ಎಂದು ವಿಷಾದ ವ್ಯಕ್ತಪಡಿಸಿ, ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎಂದಿದ್ದರು.

Must Read

Skip to toolbar