ಹದಿಹರೆಯ ಎಂಬುದು ಜೀವನದ ಅತ್ಯಂತ ಸೂಕ್ಷ್ಮ ಹಾಗೂ ಪರಿವರ್ತನೆಯ ಹಂತ. ಈ ವಯಸ್ಸಿನಲ್ಲಿ ಮಕ್ಕಳ ಶರೀರ ಮತ್ತು ಮನಸ್ಸಿನಲ್ಲಿ ಹಾರ್ಮೋನ್‌ಗಳ ಏರಿಳಿತ ಉಂಟಾಗುವುದು ಸಹಜ. ಹೀಗಾಗಿ ಮಕ್ಕಳು ಒಮ್ಮೆಲೆ ಸಂತೋಷವಾಗಿ, ಮತ್ತೊಮ್ಮೆ ಸಿಟ್ಟಿನಿಂದ ಇರುವುದು ಸಹಜ. ಆದರೆ, ಪೋಷಕರಾಗಿ ಕಾಡುವ ದೊಡ್ಡ ಪ್ರಶ್ನೆಯೆಂದರೆ, ಇದು ಸಾಮಾನ್ಯ ‘ಮೂಡ್ ಸ್ವಿಂಗ್ಸ್’ ಅಥವಾ ‘ಖಿನ್ನತೆ’ಯಾ? ಇವೆರಡರ ನಡುವಿನ ವ್ಯತ್ಯಾಸವನ್ನು ಪ್ರತಿಯೊಬ್ಬ ಪೋಷಕರೂ ತಿಳಿದುಕೊಳ್ಳುವುದು ಅಗತ್ಯ.
ಕಾಮನ್ ಮೂಡ್ ಸ್ವಿಂಗ್ಸ್
ಕಾಮನ್ ಮೂಡ್ ಸ್ವಿಂಗ್ಸ್ ಎಂದರೆ ಕ್ಷಣ ಮಾತ್ರದಲ್ಲಿ ಬದಲಾಗುವ ಭಾವನೆಗಳು. ಮಗು ಒಂದು ಕ್ಷಣ ಕೋಪಗೊಂಡರೂ, ಸ್ವಲ್ಪ ಸಮಯದ ನಂತರ ಅಥವಾ ಸ್ನೇಹಿತರೊಂದಿಗೆ ಮಾತನಾಡಿದಾಗ ಮತ್ತೆ ಮಾಮೂಲಿ ಸ್ಥಿತಿಗೆ ಮರಳುತ್ತದೆ. ಆದರೆ, ಖಿನ್ನತೆಯು ತಾತ್ಕಾಲಿಕವಲ್ಲ. ಮಗು ಸತತವಾಗಿ ಎರಡು ವಾರಗಳಿಗಿಂತ ಹೆಚ್ಚು ಕಾಲ ತೀವ್ರ ಬೇಸರ, ನಿರಾಸೆ ಅಥವಾ ಮೌನದಲ್ಲಿದ್ದರೆ, ಅದು ಖಿನ್ನತೆಯ ಲಕ್ಷಣವಾಗಿರಬಹುದು.
ಚೇಂಜ್ ಇನ್ ಆಕ್ಟಿವಿಟೀಸ್
ಮೂಡ್ ಸ್ವಿಂಗ್ಸ್ ಇರುವ ಮಗು ತನಗೆ ಇಷ್ಟವಿರುವ ಕೆಲಸಗಳು ಅಥವಾ ಸ್ನೇಹಿತರೊಂದಿಗೆ ಬೆರೆಯಲು ಇಷ್ಟಪಡುತ್ತದೆ. ಆದರೆ ಖಿನ್ನತೆಗೆ ಒಳಗಾದ ಮಗು ತನಗೆ ಹಿಂದೆ ಅತ್ಯಂತ ಇಷ್ಟವಾಗುತ್ತಿದ್ದ ಕೆಲಸಗಳಿಂದಲೂ ಸಂಪೂರ್ಣವಾಗಿ ದೂರ ಸರಿಯುತ್ತದೆ. ಯಾರೊಂದಿಗೂ ಮಾತನಾಡದೆ ತನ್ನದೇ ಕೋಣೆಯಲ್ಲಿ ಒಂಟಿಯಾಗಿ ಕೂರುವುದು, ಶಾಲೆಗೆ ಹೋಗಲು ನಿರಾಕರಿಸುವುದು ಖಿನ್ನತೆಯ ಲಕ್ಷಣ.
ನೋ ಸ್ಲೀಪ್, ನೋ ಫುಡ್
ಮೂಡ್ ಸ್ವಿಂಗ್ಸ್ ಮಕ್ಕಳ ದಿನಚರಿಯನ್ನು ಅಷ್ಟಾಗಿ ಬಾಧಿಸುವುದಿಲ್ಲ. ಆದರೆ ಖಿನ್ನತೆಯಿಂದ ಬಳಲುವ ಮಕ್ಕಳಲ್ಲಿ ನಿದ್ರೆ ಮತ್ತು ಆಹಾರದ ಅಭ್ಯಾಸ ತೀವ್ರವಾಗಿ ಬದಲಾಗುತ್ತದೆ. ಕೆಲವರು ಅತಿಯಾಗಿ ನಿದ್ರಿಸಿದರೆ, ಇನ್ನು ಕೆಲವರಿಗೆ ರಾತ್ರಿಯಿಡೀ ನಿದ್ರೆಯೇ ಬರುವುದಿಲ್ಲ. ಅದೇ ರೀತಿ, ಆಹಾರ ಸೇವನೆ ತೀವ್ರವಾಗಿ ಕಡಿಮೆಯಾಗುವುದು ಅಥವಾ ಅತಿಯಾಗಿ ತಿನ್ನುವ ಅಭ್ಯಾಸ ಕಾಣಿಸಿಕೊಳ್ಳುತ್ತದೆ.
ಗಿಲ್ಟ್ ಪ್ರೆಷರ್
ಖಿನ್ನತೆಗೆ ಒಳಗಾದ ಮಕ್ಕಳು “ನಾನು ಯಾವುದಕ್ಕೂ ಪ್ರಯೋಜನವಿಲ್ಲ”, “ನನ್ನಿಂದ ಎಲ್ಲರಿಗೂ ತೊಂದರೆ” ಎಂಬ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ತಮ್ಮ ಮೇಲೆಯೇ ತಮಗೆ ಜಿಗುಪ್ಸೆ ಮೂಡಿ, ಸಣ್ಣ ವಿಷಯಕ್ಕೂ ಅತಿಯಾದ ಅಪರಾಧಿ ಪ್ರಜ್ಞೆ ಪಡುತ್ತಾರೆ. ಇದು ಸಾಮಾನ್ಯ ಕೋಪ ಅಥವಾ ಮುನಿಸಿಗಿಂತ ಭಿನ್ನವಾದದ್ದು.
ಪೋಷಕರು ಏನು ಮಾಡಬೇಕು?
ನಿಮ್ಮ ಮಗುವಿನಲ್ಲಿ ಖಿನ್ನತೆಯ ಲಕ್ಷಣಗಳು ಕಂಡುಬಂದರೆ, ತಕ್ಷಣವೇ ಅವರನ್ನು ಗದರಿಸುವುದು ಅಥವಾ “ಇದೆಲ್ಲ ನಿನ್ನ ಭ್ರಮೆ” ಎಂದು ನಿರ್ಲಕ್ಷಿಸುವುದು ಮಾಡಬೇಡಿ. ಅವರ ಮಾತುಗಳನ್ನು ತಾಳ್ಮೆಯಿಂದ ಆಲಿಸಿ, ಪ್ರೀತಿಯಿಂದ ಬೆಂಬಲಿಸಿ. ಅಗತ್ಯಬಿದ್ದರೆ ವಿಳಂಬ ಮಾಡದೆ ಮಾನಸಿಕ ಆರೋಗ್ಯ ತಜ್ಞರ ಸಲಹೆ ಪಡೆಯುವುದು ಮಗುವಿನ ಭವಿಷ್ಯಕ್ಕೆ ಅತ್ಯಂತ ಒಳಿತು.



