October 9, 2026
Friday, October 9, 2026
spot_img

CINEMA | ‘ಬಾಷಾ 2’ ಬೇಡ ಎಂದಿದ್ದ ರಜನಿಕಾಂತ್, ‘ಜೈಲರ್ 2’ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದೇಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

2023ರಲ್ಲಿ ಬಿಡುಗಡೆಯಾದ ‘ಜೈಲರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ನಂತರ, ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಹೆಸರು ಇಡೀ ದೇಶಾದ್ಯಂತ ಸಖತ್ ಸದ್ದು ಮಾಡಿತ್ತು. ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್‌ಗಳು ಮತ್ತು ನಿರ್ಮಾಣ ಸಂಸ್ಥೆಗಳು ಅವರ ನಿರ್ದೇಶನಕ್ಕಾಗಿ ಸಾಲಿನಲ್ಲಿ ನಿಂತಿದ್ದವು. ಮಧ್ಯದಲ್ಲಿ ಜೂನಿಯರ್ ಎನ್‌ಟಿಆರ್ ಜೊತೆ ನೆಲ್ಸನ್ ತೆಲುಗು ಸಿನಿಮಾ ಮಾಡಲಿದ್ದಾರೆ ಎಂಬ ವದಂತಿಗಳೂ ಹರಿದಾಡಿದ್ದವು. ಆದರೆ, ಎಲ್ಲ ಅಂದಾಜುಗಳನ್ನು ಉಲ್ಟಾ ಮಾಡಿ ನೆಲ್ಸನ್, ತಲೈವಾ ರಜನಿಕಾಂತ್ ಅವರೊಂದಿಗೆ ‘ಜೈಲರ್ 2’ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದರು.

ಇತ್ತೀಚೆಗೆ ‘ಸನ್ ನೆಕ್ಸ್ಟ್’ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾದ ‘ಜೈಲರ್ 2 ಸೂಪರ್ ಶೋ’ನಲ್ಲಿ ಭಾಗವಹಿಸಿದ್ದ ಸೂಪರ್‌ಸ್ಟಾರ್ ರಜನಿಕಾಂತ್, ಸೀಕ್ವೆಲ್‌ಗಳ ಬಗ್ಗೆ ತಮಗಿದ್ದ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. “ನನಗೆ ಸಾಮಾನ್ಯವಾಗಿ ಸಿನಿಮಾಗಳ ಸೀಕ್ವೆಲ್ (ಭಾಗ-2) ಮಾಡಲು ಇಷ್ಟವಿರುವುದಿಲ್ಲ. ಮೊದಲ ಭಾಗದಲ್ಲಿದ್ದ ಕಥೆಗೆ ಸ್ವಲ್ಪ ಉಪ್ಪು-ಖಾರ ಸೇರಿಸಿ ಮತ್ತೆ ತರುತ್ತಾರೆ ಅನಿಸುತ್ತದೆ. ಹಿಂದೆ ನನ್ನ ಸೂಪರ್ ಹಿಟ್ ಚಿತ್ರಗಳಾದ ‘ಬಾಷಾ’ ಮತ್ತು ‘ಪೇಟಾ’ ಚಿತ್ರಗಳ ಸೀಕ್ವೆಲ್ ಮಾಡಲು ಅವಕಾಶ ಬಂದಾಗಲೂ ನಾನು ಒಪ್ಪಿರಲಿಲ್ಲ,” ಎಂದು ರಜನಿ ಹೇಳಿದ್ದಾರೆ.

ಆದರೆ ‘ಜೈಲರ್’ ಚಿತ್ರದ ಸೀಕ್ವೆಲ್‌ಗೆ ರಜನಿಕಾಂತ್ ಗ್ರೀನ್ ಸಿಗ್ನಲ್ ನೀಡಲು ಬಲವಾದ ಕಾರಣವಿತ್ತು. ಚಿತ್ರ ರಿಲೀಸ್ ಆದ ಮೇಲೆ ಒಟಿಟಿಯಲ್ಲಿ ಅದನ್ನು ವೀಕ್ಷಿಸಿದ ರಜನಿಕಾಂತ್‌ಗೆ ಕಥೆಯಲ್ಲಿದ್ದ ಕ್ಲೈಮ್ಯಾಕ್ಸ್ ಪಾಯಿಂಟ್ ಸಖತ್ ಕನೆಕ್ಟ್ ಆಯಿತು. “ಚಿತ್ರದ ಕೊನೆಯಲ್ಲಿ ವಿಲನ್ ವರ್ಮನ್ ಸಾಯುವ ಮುನ್ನ ‘ನನ್ನ ಹಿಂದೆ ದೊಡ್ಡ ಜಾಲವೇ ಇದೆ, ನಿನ್ನನ್ನು ಸುಮ್ಮನೆ ಬಿಡಲ್ಲ’ ಎಂದು ಬೆದರಿಕೆ ಹಾಕುತ್ತಾನೆ. ಜೊತೆಗೆ, 1000 ಕೋಟಿ ಮೌಲ್ಯದ ಮೂರು ಕಂಟೇನರ್‌ಗಳ ರಹಸ್ಯವೂ ಉಳಿದಿರುತ್ತದೆ. ಈ ಪಾಯಿಂಟ್‌ಗಳನ್ನು ಇಟ್ಟುಕೊಂಡು ಎರಡನೇ ಭಾಗ ಮಾಡಲು ದೊಡ್ಡ ಸಾಮರ್ಥ್ಯವಿದೆ ಅನಿಸಿತು” ಎಂದು ತಲೈವ ವಿವರಿಸಿದ್ದಾರೆ.

ವಿಶೇಷವೆಂದರೆ, ಸೂಪರ್‌ಸ್ಟಾರ್ ಸ್ವತಃ ಸೀಕ್ವೆಲ್ ಪ್ರಸ್ತಾಪ ತಂದಾಗ ನಿರ್ದೇಶಕ ನೆಲ್ಸನ್ ಆರಂಭದಲ್ಲಿ ಕೊಂಚ ಸಂಕೋಚ ಮತ್ತು ಹಿಂಜರಿಕೆಯಲ್ಲಿದ್ದರಂತೆ. ‘ಜೈಲರ್’ ಯಶಸ್ಸಿನ ನಂತರ ಎಲ್ಲೆಡೆಯಿಂದ ಭಾರಿ ಸಂಭಾವನೆಯ ಆಫರ್‌ಗಳು ನೆಲ್ಸನ್‌ಗೆ ಬರುತ್ತಿದ್ದವು. ಇಂತಹ ಸಮಯದಲ್ಲಿ ಮುತ್ತುವೇಲ್ ಪಾಂಡಿಯನ್ ಕಥೆಯನ್ನು ಮುಂದುವರಿಸಿ, ಮೊದಲ ಭಾಗಕ್ಕಿಂತಲೂ ಗಟ್ಟಿಯಾಗಿ ಪ್ರೇಕ್ಷಕರ ಮುಂದೆ ತರುವುದು ಸುಲಭದ ಮಾತಾಗಿರಲಿಲ್ಲ. ಆದರೆ, ರಜನಿಕಾಂತ್ ಅವರ ಭರವಸೆ ಮತ್ತು ಕಥೆಯ ಸಳೆತ ನೆಲ್ಸನ್ ಅವರನ್ನು ಮತ್ತೆ ‘ಟೈಗರ್’ ಮುತ್ತುವೇಲ್ ಪಾಂಡಿಯನ್ ಪ್ರಪಂಚವನ್ನು ನಿರ್ಮಿಸಲು ಪ್ರೇರೇಪಿಸಿತು.

Must Read