October 9, 2026
Friday, October 9, 2026
spot_img

ದೀದಿ ಕೋಟೆಗೆ ಲಗ್ಗೆ ಇಟ್ಟ ಕಮಲ: ನಂದಿಗ್ರಾಮ, ರೆಜಿನಗರದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಜಿದ್ದಾಜಿದ್ದಿಗೆ ಕಾರಣವಾಗಿದ್ದ ನಂದಿಗ್ರಾಮ ಹಾಗೂ ಮುರ್ಷಿದಾಬಾದ್ ಜಿಲ್ಲೆಯ ರೆಜಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಭಾರತೀಯ ಜನತಾ ಪಾರ್ಟಿ (BJP) ಎರಡು ಕ್ಷೇತ್ರಗಳಲ್ಲೂ ಐತಿಹಾಸಿಕ ವಿಜಯ ದಾಖಲಿಸಿದೆ. ಟಿಎಂಸಿ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿಗಳನ್ನು ಧೂಳೀಪಟ ಮಾಡಿರುವ ಬಿಜೆಪಿ, ಮುಸ್ಲಿಂ ಕ್ಷೇತ್ರದಲ್ಲೂ ಭರ್ಜರಿ ಕಮಲ ಅರಳಿಸಿ ದೇಶದ ಗಮನ ಸೆಳೆದಿದೆ.

ನಂದಿಗ್ರಾಮದಲ್ಲಿ 1.22 ಲಕ್ಷ ಮತಗಳ ದಾಖಲೆಯ ಜಯ

ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಂಡು ನಂದಿಗ್ರಾಮ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಉಪಚುನಾವಣೆ ನಡೆದಿತ್ತು. ಈ ಹೈಪ್ರೊಫೈಲ್ ಕದನದಲ್ಲಿ ಬಿಜೆಪಿಯ ಮಹಿಳಾ ಅಭ್ಯರ್ಥಿ ಹಾಸಿರಾಣಿ ರಾಥ್ ಅವರು ತಮ್ಮ   ಪ್ರತಿಸ್ಪರ್ಧಿ, ಟಿಎಂಸಿ ಬೆಂಬಲಿತ ಕಾಂಗ್ರೆಸ್‌ನ ಮಿಲನ್ ಪ್ರಧಾನ್ ವಿರುದ್ಧ ಬರೋಬ್ಬರಿ 1,22,753 ಮತಗಳ ಬೃಹತ್ ಅಂತರದಿಂದ ಐತಿಹಾಸಿಕ ಜಯ ಸಾಧಿಸಿದ್ದಾರೆ. ಮೇ 6 ರಂದು ಮಧ್ಯಾಮ್‌ಗ್ರಾಮ್‌ನಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ಸುವೇಂದು ಅಧಿಕಾರಿ ಅವರ ಆಪ್ತ ಚಂದ್ರನಾಥ್ ರಾಥ್ ಅವರ ತಾಯಿಯೇ ಈ ಹಾಸಿರಾಣಿ ರಾಥ್ ಎಂಬುದು ಗಮನಾರ್ಹ.

ಮುಸ್ಲಿಂ ಕೋಟೆಯಲ್ಲೂ ಇತಿಹಾಸ ಬರೆದ ಶಂಖರವ್ ಸರ್ಕಾರ್

ಇನ್ನೊಂದೆಡೆ, ಶೇ. 70 ಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ರೆಜಿನಗರ ಕ್ಷೇತ್ರದಲ್ಲಿ ಬಿಜೆಪಿಯ ಶಂಖರವ್ ಸರ್ಕಾರ್ ಅವರು ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಚುನಾವಣಾ ಆಯೋಗದ ಪ್ರಕಾರ, ಶಂಖರವ್ ಅವರು 1,29,914 ಮತಗಳನ್ನು ಪಡೆಯುವ ಮೂಲಕ ಆಮ್ ಜನತಾ ಉನ್ನಯನ್ ಪಾರ್ಟಿಯ ಗುಲಾಂ ನಬಿ ಆಜಾದ್ ಅವರ ವಿರುದ್ಧ 75,816 ಮತಗಳ ಭಾರಿ ಅಂತರದಿಂದ ಗೆದ್ದಿದ್ದಾರೆ.

ಇದನ್ನೂ ಓದಿ:

ಸುಳ್ಳು ಪ್ರಚಾರ ಧೂಳೀಪಟ ಎಂದ ಸಿಎಂ ಸುವೇಂದು ಅಧಿಕಾರಿ

ಈ ಐತಿಹಾಸಿಕ ಜಯದ ಬೆನ್ನಲ್ಲೇ ಕೋಲ್ಕತ್ತಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರನ್ನು ಬಾಂಗ್ಲಾದೇಶಕ್ಕೆ ಅಟ್ಟುತ್ತಾರೆ ಎಂದು ಮಮತಾ ಬ್ಯಾನರ್ಜಿ ಮತ್ತು ಕಮ್ಯುನಿಸ್ಟರು ಮುಸ್ಲಿಂ ಬಾಂಧವರಲ್ಲಿ ತಪ್ಪು ಕಲ್ಪನೆ ಮೂಡಿಸಿದ್ದರು. ಆದರೆ ಪ್ರಧಾನಿ ಮೋದಿ ನಾಯಕತ್ವದ ‘ವಂದೇ ಮಾತರಂ’ ಮತ್ತು ರಾಷ್ಟ್ರೀಯತೆಯ ತತ್ವ ಇಂದು ಎಲ್ಲರಿಗೂ ತಲುಪಿದೆ. ರೆಜಿನಗರದಲ್ಲಿ ಅನ್ನಪೂರ್ಣ ಯೋಜನೆ ಮತ್ತು ವೃದ್ಧಾಪ್ಯ ವೇತನದ ಹೆಚ್ಚುವರಿ 500 ರೂಪಾಯಿ ಲಾಭ ಪಡೆದ ಲಕ್ಷಾಂತರ ಮುಸ್ಲಿಂ ಮಹಿಳೆಯರು ನಮಗೆ ಹಾರೈಸಿದ್ದಾರೆ. ಮುಂಬರುವ ದಿನಗಳಲ್ಲಿ ಬಂಗಾಳಿ ಭಾಷಿಕ ಮುಸ್ಲಿಮರ ಬಹುಪಾಲು ಮತಗಳು ಬಿಜೆಪಿಗೆ ಸಿಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Must Read

Skip to toolbar