ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾರ್ಜಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್’ ಲೀಗ್‌ನಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ, ಅಭಿಮಾನಿಗಳ ಪ್ರೀತಿಯ ‘ಮಿಸ್ಟರ್ 360’ ಎಬಿ ಡಿವಿಲಿಯರ್ಸ್ ರನ್ ಮಳೆ ಹರಿಸಿದ್ದಾರೆ. ಆಸ್ಟ್ರೇಲಿಯಾ ಚಾಂಪಿಯನ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ತಮ್ಮ ಹಳೆಯ ರೌದ್ರಾವತಾರ ತಳೆದ ಡಿವಿಲಿಯರ್ಸ್, ಬೌಂಡರಿ-ಸಿಕ್ಸರ್‌ಗಳ ಸುರಿಮಳೆಗೈದು ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ತಂಡಕ್ಕೆ ಏಕಪಕ್ಷೀಯ ಹಾಗೂ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡಕ್ಕೆ ನಾಯಕ ಡೇವಿಡ್ ವಾರ್ನರ್ (48ರನ್) ಹಾಗೂ ಡಾರ್ಸಿ ಶಾರ್ಟ್ ಭದ್ರ ಅಡಿಪಾಯ ಒದಗಿಸಿದರು. ಡಾರ್ಸಿ ಶಾರ್ಟ್ ಕೇವಲ 25 ಎಸೆತಗಳಲ್ಲಿ 7 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 66 ರನ್ ಬಾರಿಸಿದರು. ಕೊನೆಯಲ್ಲಿ ಜೋ ಬರ್ನ್ಸ್ (38) ಹಾಗೂ ಜೊನಾಥನ್ ವೆಲ್ಸ್ (23) ಚುರುಕಿನ ರನ್ ಕಲೆಹಾಕಿದ್ದರಿಂದ ಆಸ್ಟ್ರೇಲಿಯಾ ತಂಡ 5 ವಿಕೆಟ್ ನಷ್ಟಕ್ಕೆ 209 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
210 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಗೆ ಆರಂಭಿಕ ಆಟಗಾರ ರಿಚರ್ಡ್ ಲೆವಿ (29 ಎಸೆತಗಳಲ್ಲಿ 66 ರನ್) ಬಿರುಸಿನ ಆರಂಭ ನೀಡಿದರು. ಆ ಬಳಿಕ ಕ್ರೀಸ್‌ಗೆ ಬಂದ ಎಬಿ ಡಿವಿಲಿಯರ್ಸ್ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು. ಆರಂಭದ 3 ಎಸೆತಗಳಲ್ಲಿ ರನ್ ಗಳಿಸದಿದ್ದರೂ, ೭ನೇ ಎಸೆತದಲ್ಲಿ ಮೊದಲ ಸಿಕ್ಸರ್ ಸಿಡಿಸಿ ಗೇರ್ ಬದಲಾಯಿಸಿದರು. ಆಸ್ಟ್ರೇಲಿಯಾದ ಪ್ರಮುಖ ಬೌಲರ್‌ಗಳಾದ ಬೆನ್ ಲಾಫ್ಲಿನ್ ಹಾಗೂ ಕೇನ್ ರಿಚರ್ಡ್ಸನ್ ಬೌಲಿಂಗ್ ಅನ್ನು ಚಚ್ಚಿಬೆಳೆದ ಡಿವಿಲಿಯರ್ಸ್ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ನಂತರದ ಕೇವಲ 14 ಎಸೆತಗಳಲ್ಲಿ ಮುಂದಿನ ೫೦ ರನ್ ಬಾರಿಸಿದ ಎಬಿಡಿ, ಬೆನ್ ಹೆಲ್ಫೆನ್‌ಹೌಸ್ ಎಸೆತದಲ್ಲಿ ಸಿಕ್ಸರ್ ಎತ್ತುವ ಮೂಲಕ ಕೇವಲ 37 ಎಸೆತಗಳಲ್ಲಿ ತಮಗಾಗಿ ಶತಕದ ಮೈಲಿಗಲ್ಲು ತಲುಪಿದರು. ಅಂತಿಮವಾಗಿ 40 ಎಸೆತಗಳಲ್ಲಿ 11 ಭರ್ಜರಿ ಸಿಕ್ಸರ್‌ಗಳೊಂದಿಗೆ 111 ರನ್ ಬಾರಿಸಿ ಅಜೇಯರಾಗಿ ಉಳಿದರು.



