- ಎಸ್. ರುದ್ರೇಶ್ವರ
ಹೊಸದಿಗಂತ ವರದಿ ರಾಮನಗರ:
ರಾಜ್ಯದಲ್ಲಿ ಸಾಕಷ್ಟು ಸದ್ದುಮಾಡಿದ್ದ, ಹಲವು ರಾಜಕೀಯ ನಾಯಕರ ರಾಜಕೀಯ ಭವಿಷ್ಯ ಕಟ್ಟಿಕೊಟ್ಟ ನೀರಾ ಗೋಲಿಬಾರ್‌ಗೆ ಇದೀಗ 25ವರ್ಷಗಳು ಸಂದಿದೆ.
ನುಸಿಪೀಡೆಯಿಂದ ಬರ್ಬಾದಾಗಿದ್ದ ಬದುಕು ಕಟ್ಟಿಕೊಳ್ಳಲು ರೈತರು ಆರಂಭಿಸಿದ ನೀರಾಚಳವಳಿ ಗೋಲಿಬಾರ್ ನಲ್ಲಿ ಇಬ್ಬರು ರೈತರ ಬಲಿದಾನದೊಂದಿಗೆ ದುರಂತ ಅಂತ್ಯ ಕಂಡಿತು. ಆದರೆ, ನೀರಾ ಉತ್ಪಾದನೆಗೆ ಅನುಮತಿ ಬೇಕು ಎಂಬ ಚಳವಳಿಯ ಪ್ರಮುಖ ಆಶಯ ಮಾತ್ರ ಇಂದಿಗೂ ಈಡೇರಿಲ್ಲ ಎಂಬುದು ವಿಷಾದನೀಯ.
2000ನೇ ಇಸವಿಯಲ್ಲಿ ಆರಂಭವಾದ ನೀರಾಚಳವಳಿಗೆ 21ನೇ ಶತಮಾನದ ಆರಂಭದಲ್ಲಿ ರಾಜ್ಯದಲ್ಲಿ ಆರಂಭವಾದ ಪ್ರಮುಖ ರೈತಚಳವಳಿ ಎಂಬ ಕಾರಣಕ್ಕೆ ಪ್ರಾಮುಖ್ಯತೆ ಪಡೆಯಿತು. ಹಾಸನ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಆರಂಭವಾದ ನೀರಾ ಚಳವಳಿ ತಾರಕ್ಕೇರಿದ್ದು ಚನ್ನಪಟ್ಟಣದಲ್ಲಿ. ರೈತರಿಂದ ಆರಂಭವಾದ ಚಳವಳಿ ಕ್ರಮೇಣ ರಾಜಕೀಯ ಸಂಘರ್ಷಕ್ಕೆ ತಿರುಗಿಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡರು ಪಾದಯಾತ್ರೆ ನಡೆಸಿದ್ದು, ಬಳಿಕ ನಡೆದ ರಾಜಕೀಯ ಸಂಘರ್ಷಗಳು ಇಂದಿಗೆ ಇತಿಹಾಸದ ಪುಟಸೇರಿವೆ.

2000ನೇ ಇಸವಿಯ ಆರಂಭದ ವೇಳೆಗೆ ಜಿಲ್ಲೆಯಲ್ಲಿ ಬರತೀವ್ರವಾಗಿತ್ತು. ಬರದಿಂದಾಗಿ ಕೃಷಿ ಚಟುವಟಿಕೆಗಳು ಸ್ಥಬ್ಧವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆಯಾಗಿರುವ ತೆಂಗು ರೈತರಿಗೆ ಅಲ್ಪ ಸ್ವಲ್ಪ ಆದಾಯ ತಂದುಕೊಡುತಿತ್ತು. ಆದರೆ, ತೆಂಗು ಬೆಳೆಗೆ ಕಾಣಿಸಿಕೊಂಡ ನುಸಿಪೀಡೆ ಯಿಂದಾಗಿ ತೆಂಗಿನ ಫಸಲು ಕೈಕೊಟ್ಟಿತು. ರೋಗಗ್ರಸ್ಥ ತೆಂಗಿನಮರಗಳು ನೆಲಕ್ಕುರುಳಲಾರಂಭಿಸಿದವು. ನೀರಾ ಇಳಿಸುವುದರಿಂದ ನುಸಿಪೀಡೆ ತಪ್ಪಿಸಬಹುದು ಎಂಬ ಸಲಹೆಯ ಮೇರೆಗೆ ತೆಂಗುಬೆಳೆಗಾರರು ನೀರಾ ಇಳಿಸುವ ಮೂಲಕ ರೈತಮುಖಂಡ ಪ್ರೊ.ನಂಜುಡಸ್ವಾಮಿ ಅವರ ನೇತೃತ್ವದಲ್ಲಿ ನೀರಾ ಚಳವಳಿಯನ್ನು ರಾಜ್ಯದಲ್ಲಿ ಆರಂಭಿಸಿದರು.
ಆದರೆ, ತೆಂಗಿನ ಮರಗಳಿಂದ ಇಳಿಸಿದ ನೀರಾ ಕೆಲವೇ ಗಂಟೆಗಳಲ್ಲಿ ಹುಳಿಯಾಗಿ ಹೆಂಡವಾಗಿ ಪರಿವರ್ತನೆಯಾಗುವುದರಿಂದ ಅಬ್ಕಾರಿ ಕಾಯಿದೆಯಡಿ ನೀರಾ ಇಳಿಸಲು ಅನುಮತಿ ಇರಲಿಲ್ಲ. ನೀರಾ ಉತ್ಪಾದನೆಗೆ ಮುಂದಾದ ರೈತರಿಗೆ ಪೊಲೀಸ್ ಮತ್ತು ಅಬ್ಕಾರಿ ಇಲಾಖೆ ಅಡ್ಡಿಪಡಿಸಲಾರಂಭಿಸಿತು. ಅದೇ ವೇಳೆಗೆ ಗ್ರಾಮೀಣ ಭಾಗದಲ್ಲಿ ಮಾರಾಟವಾಗುತ್ತಿದ್ದ ಸರಾಯಿಗೆ ನೀರಾ ಹೊಡೆತ ನೀಡಿದ್ದರಿಂದ ಸಾರಾಯಿ ಮತ್ತು ಮದ್ಯದ ಲಾಭಿಸಹ ಅಧಿಕಾರಿಗಳು ಮತ್ತು ಸರ್ಕಾರದ ಮೇಲೆ ಒತ್ತಡ ತರಲಾರಂಭಿಸಿದ್ದರಿಂದ, ರೈತರು ಮತ್ತು ಸರ್ಕಾರದ ನಡುವೆ ಸಂಘರ್ಷ ಏರ್ಪಟ್ಟಿತು.
ನೀರಾ ಉತ್ಪಾದನೆಗೆ ಮುಂದಾದ ರೈತರ ವಿರುದ್ಧ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಕಾನೂನು ಕ್ರಮ ಜರುಗಿಸಲು ಆರಂಭಿಸಿತು. ನೀರಾ ಚಳವಳಿಕಾರರು ಮತ್ತು ಪೊಲೀಸ್ ಇಲಾಖೆಯ ನಡುವೆ ನಿರಂತರವಾಗಿ ಸಂಘರ್ಷ ನಡೆಯುತ್ತಲೇ ಇತ್ತು. ನೀರಾ ಇಳಿಸದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಚನ್ನಪಟ್ಟಣದ ವಿಶ್ವಪ್ರೇಮಿ ಸಮಾರಂಭಭವನದಲ್ಲಿ ಸಭೆ ನಡೆದು ಜಿಲ್ಲಾಡಳಿತ ಮತ್ತು ರೈತರ ನಡುವೆ ವಾಗ್ಸಮರ ಏರ್ಪಟ್ಟಿತ್ತು. ರೈತರು ನೀರಾ ಇಳಿಸುತ್ತೇವೆ ಎಂದು ಪಟ್ಟುಹಿಡಿದರೆ, ಜಿಲ್ಲಾಡಳಿತ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿತ್ತು.
ಈ ಸಭೆಯ ಬಳಿಕ 2001ರ ಆ.7 ರಂದು ಚನ್ನಪಟ್ಟಣ ನಗರ ಪ್ರದೇಶದಲ್ಲಿ ಸಾರ್ವಜನಿಕವಾಗಿ ನೀರಾ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ಪೊಲೀಸರು ದಾಳಿಮಾಡಿ ನೀರಾವನ್ನು ವಶಕ್ಕೆ ಪಡಿಸಿಕೊಳ್ಳುವ ಜೊತೆಗೆ, ಅವರನ್ನು ಬಂಧಿಸಿದರು. ಅಂದೇ ಸಂಜೆ ನೀರಾ ಹೋರಾಟ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನೀರಾ ಮಾರಾಟಗಾರರು ಮತ್ತು ಚಳವಳಿಗಾರರ ಮೇಲಿನ ಪೊಲೀಸ್‌ಧೌರ್ಜನ್ಯ ಖಂಡಿಸಿ ಅ.8ರಂದು ಬೃಹತ್ ಪ್ರತಿಭಟನೆಗೆ ಚಳವಳಿಗಾರರು ಸಜ್ಜಾಗಿದ್ದರು. ಆದರೆ, ಆ.8ರಂದು ಬೆಳ್ಳಂಬೆಳಿಗ್ಗೆ ನೀರಾ ಹೋರಾಟ ಸಮಿತಿಯ ಕಾರ್ಯದರ್ಶಿಯಾಗಿದ್ದ ಎಲ್.ರಮೇಶ್ (ರಮೇಶ್‌ಗೌಡ) ಅವರನ್ನು ಪೊಲೀಸರು ಬಂಧಿಸಿದರು. ಇದರಿಂದ ಕುಪಿತಗೊಂಡ ರೈತರು ನಮ್ಮ ಹೋರಾಟವನ್ನು ಸರ್ಕಾರ ಹತ್ತಿಕ್ಕುತ್ತಿದೆ ಎಂದು ಚನ್ನಪಟ್ಟಣದ ಪೊಲೀಸ್ ಠಾಣೆ ವೃತ್ತದಲ್ಲಿ ಅರೆಬೆತ್ತಲೆ ಪ್ರತಿಭಟನೆ ಮತ್ತು ರಸ್ತೆತಡೆ ಆರಂಭಿಸಿದರು.
ಆರಂಭದಲ್ಲಿ ಶಾಂತಿಯುತವಾಗಿ ಆರಂಭವಾದ ಪ್ರತಿಭಟನೆ ಕ್ರಮೇಣ ಹಿಂಸಾಸ್ವರೂಪಕ್ಕೆ ತಿರುಗಿತು. ಚಳವಳಿಗಾರರ ಮೇಲೆ ಪೊಲೀಸರು ಲಾಠಿಪ್ರಹಾರ ನಡೆಸುವ ಜೊತೆಗೆ ನೂರಾರು ರೈತಮುಖಂಡರನ್ನು ಬಂಧಿಸಿದರು. ಈ ಸಂದರ್ಭದಲ್ಲಿ ಕೆಲ ಬಸ್ಸುಗಳಿಗೆ ಬೆಂಕಿ ಹಚ್ಚಲಾಯಿತು. ಕಲ್ಲು ತೂರಾಟ ಸಹ ನಡೆಯಿತು. ಶಾಂತಿಯುತ ಪ್ರತಿಭಟನೆಯನ್ನು ಕೆಲ ಕಿಡಿಗೇಡಿಗಳು ದುರುದ್ದೇಶದಿಂದ ಹಾಳುಮಾಡಿದರು ಎಂದು ಇಂದಿಗೂ ರೈತಸಂಘದ ಮುಖಂಡರು ಆರೋಪಿಸುತ್ತಾರೆ.
ಚನ್ನಪಟ್ಟಣ ನಗರದಲ್ಲಿ 2001ರ ಅ.8ರಂದು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದ ಬೆನ್ನಲ್ಲೆ, ಅ.9ರಂದು ಬೆಳಗ್ಗಿನ ಜಾವ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಇಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರತಿನಿಧಿಸುತ್ತಿದ್ದ ಸಾತನೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ವಿಠಲೇನಹಳ್ಳಿ ಗ್ರಾಮದಲ್ಲಿ ನೀರಾ ಇಳಿಸುತ್ತಿದ್ದ ರೈತರನ್ನು ಬಂಧಿಸಲು ಪಿಎಸ್‌ಐ ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಪೊಲೀಸರು ತೆರಳಿದರು. ಆದರೆ, ಗ್ರಾಮವನ್ನು ಪ್ರವೇಶಿಸಲು ಗ್ರಾಮಸ್ಥರು ಅವಕಾಶ ನೀಡಲಿಲ್ಲ. ಇದರಿಂದಾಗಿ ಗ್ರಾಮದಲ್ಲಿ ಪ್ರಕ್ಷÄಬ್ಧ ವಾತಾವರಣ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ಪಿಎಸ್‌ಐ ರಾಜೇಂದ್ರ ಕುಮಾರ್ ತಮ್ಮ ಪಿಸ್ತೂಲ್‌ನಿಂದ ಗುಂಡು ಹಾರಿಸಿದರು. ಇವರ ಗುಂಡಿಗೆ ವಿಠಲೇನಹಳ್ಳಿ ಗ್ರಾಮದ ತಮ್ಮಯ್ಯ ಮತ್ತು ಪುಟ್ಟನಂಜಯ್ಯ ಎಂಬ ಇಬ್ಬರು ರೈತರು ಬಲಿದಾನವಾದರು.
ಗೋಲಿಬಾರ್ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೋರಾಟದ ಮುಂಚೂಣಿಯಲ್ಲಿ ನಿಂತರು. ಹೋರಾಟ ಬೇರೆಯದೇ ಸ್ವರೂಪ ಪಡೆದುಕೊಂಡಿತು. ಒಕ್ಕಲಿಗರ ಶಕ್ತಿಕೇಂದ್ರದಲ್ಲಿ ಅಂದಿನ ಸಿಎಂ ಎಸ್.ಎಂ. ಕೃಷ್ಣ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಣಕಳೆ ಮೊಳಗಿಸಿದರು. ಗೋಲಿಬಾರ್ ಖಂಡಿಸಿ ವಿಠಲೇನಹಳ್ಳಿ ಗ್ರಾಮದಿಂದ ರಾಜಭವನದ ವರೆಗೆ ಪಾದಯಾತ್ರೆ ನಡೆಸಿದ ಮಾಜಿ ಪ್ರಧಾನಿ ದೇವೇಗೌಡರು ಸರ್ಕಾರದ ವಿರುದ್ಧ ಗುಡುಗಿದರು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ರಾಜಕೀಯ ರ‍್ಯಾಲಿಗಳಿಗೆ ಚನ್ನಪಟ್ಟಣ ಭೂಮಿಕೆಯಾಗಿ ಪರಿಣಮಿಸಿತು. ರೈತರು ಮತ್ತು ಪ್ರತಿಪಕ್ಷಗಳ ಹೋರಾಟದ ಹಿನ್ನೆಲೆಯಲ್ಲಿ ಅಂದಿನ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರ ನೀರಾ ಇಳಿಸಲು ಅನುಮತಿ ನೀಡುವುದಾಗಿ ಘೋಷಿಸಿತು. ನೀರಾ ಗೋಲಿಬಾರ್‌ಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೂ ಆದೇಶಿಸಿತು.
1999ರ ಚುನಾವಣೆಯಲ್ಲಿ ಪರಾಜಿತರಾಗಿದ್ದ ಮಾಜಿ ಪ್ರಧಾನಿ ದೇವೇಗೌಡರಿಗೆ ಮತ್ತೆ ರಾಜಕೀಯ ಪುನರ್‌ಜನ್ಮಕ್ಕೆ ಈ ಹೋರಾಟ ವೇದಿಕೆಯಾಯಿತು. ನೀರಾ ಹೋರಾಟದ ಬೆನ್ನಲ್ಲೇ ಅಂದಿನ ಸಂಸದ ಎಂ.ವಿ.ಚAದ್ರಶೇಖರ ಮೂರ್ತಿ ನಿಧನದಿಂದ ತೆರವಾಗಿದ್ದ ಕನಕಪುರ ಲೋಕಸಭಾ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸಿ ಗೆಲ್ಲುವು ಸಾಧಿಸುವ ಮೂಲಕ ತಮ್ಮ ರಾಜಕಾರಣದ ಹೊಸ ಇನ್ನಿಂಗ್ಸ್ ಆರಂಭಿಸಿದರು. ಇನ್ನು ಈ ಚಳವಳಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರದ್ದೂ ಪ್ರಮುಖ ಪಾತ್ರವಿದ್ದನ್ನು ಅಲ್ಲಗಳೆಯುವಂತಿಲ್ಲ. ಅಷ್ಟೇ ಅಲ್ಲದೆ ಹೋರಾಟದಲ್ಲಿ ಭಾಗಿಯಾಗಿದ್ದ ಹಲವು ರಾಜಕಾರಣಿಗಳಿಗೆ ಬೆಳವಣಿಗೆಗೆ ನೀರಾಚಳವಳಿ ಮೆಟ್ಟಿಲಾಯಿತು.
ಇಂದಿಗೆ ನೀರಾಗೋಲಿಬಾರ್‌ಗೆ 25ವರ್ಷಗಳು ತುಂಬಿದೆ. ಆದರೆ, ನೀರಾ ನೀತಿ ಜಾರಿಯಾಗಬೇಕು, ರೈತರು ನೀರಾಇಳಿಸಲು ಅನುಮತಿ ನೀಡಬೇಕು. ತೆಂಗು ಬೆಳೆಗಾರರ ಹಿತಕಾಯಬೇಕು ಎಂಬ ಚಳವಳಿಗಾರರ ಪ್ರಮುಖ ಬೇಡಿಕೆಗಳು ಇಂದಿಗೂ ಈಡೇರಿಲ್ಲ ಎಂಬುದು ವಿಷಾದನೀಯ. ರೈತ ಚಳವಳಿಯಲ್ಲಿ ಪಾಲ್ಗೊಂಡು ಗುಡುಗಿದ ವಿರೋಧ ಪಕ್ಷಗಳು ಈ 25 ವರ್ಷಗಳಲ್ಲಿ ಸಾಕಷ್ಟು ಬಾರಿ ಅಧಿಕಾರಕ್ಕೆ ಬಂದಿವೆಯಾದರೂ, ಅಧಿಕಾರಕ್ಕೆ ಬಂದಾಗ ನೀರಾ ಬಗ್ಗೆ ಗಮನಹರಿಸಲೇ ಇಲ್ಲ ಎಂಬುದು ವಿಪರ್ಯಾಸವೇ ಸರಿ.



