October 10, 2026
Saturday, October 10, 2026
spot_img

ಇನ್ಮುಂದೆ ವನ್ಯಜೀವಿ ಸಫಾರಿಗಳಲ್ಲಿ‌ ಮೊಬೈಲ್ ಬಳಕೆ ಸಂಪೂರ್ಣ ನಿಷೇಧ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇನ್ಮುಂದೆ ವನ್ಯಜೀವಿ ಸಫಾರಿಗಳಲ್ಲಿ ಫೋನ್‌ ಬಳಕೆ ಸಂಪೂರ್ಣ ನಿಷೇಧ ಮಾಡಲಾಗಿದೆ. ಈ ಬಗ್ಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವನ್ಯಜೀವಿ ಪರಿಪಾಲಕ ಕುಮಾರ್‌ ಪುಷ್ಕರ್‌ ಆದೇಶ ಹೊರಡಿಸಿದ್ದಾರೆ.

ಇದು ಸುಪ್ರೀಂ ಕೋರ್ಟ್‌ ಆದೇಶವಾಗಿದ್ದು, ಎನ್‌ಟಿಸಿಎ ಕಾರ್ಯಕರ್ತರ ಜೊತೆಗಿನ ಸಂವಾದದ ನಂತರ ಮೊಬೈಲ್‌ ಬಳಕೆ ನಿಷೇಧದ ಬಗ್ಗೆ ಮಾಹಿತಿ ನೀಡಿದ್ದಾರೆ. ವನ್ಯಜೀವಿ ಸಫಾರಿಗಳಲ್ಲಿ ಪ್ರವಾಸಿಗರು, ಚಾಲಕರು, ಗೈಡ್‌ಗಳ ಮೊಬೈಲ್‌ ಬಳಕೆಯನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ. ಜೊತೆಗೆ ತುರ್ತು ಸಂವಹನೆಗಾಗಿ ಎಲ್ಲ ಸಫಾರಿ ವಾಹನಗಳಿಗೂ ವೈರ್‌ಲೆಸ್‌ ವ್ಯವಸ್ಥೆ ಅಳವಡಿಸಲಾಗುತ್ತದೆ.

ಚಾಮರಾಜನಗರದ ಬಂಡೀಪುರ, ಕೆ.ಗುಡಿ, ಪಿ.ಜಿ. ಪಾಳ್ಯ ಹಾಗೂ ಗೋಪಿನಾಥಂನಲ್ಲಿ ನಡೆಯುವ ವನ್ಯಜೀವಿ ಸಫಾರಿ ವೇಳೆ ಫೋನ್‌ ಸಂಪೂರ್ಣ ನಿಷೇಧವಾಗಿದೆ. ಈ ಬಗ್ಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಜಿ. ಎಸ್. ಬೆಟ್ಟ ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ಪ್ರತಿಕ್ರಿಯಿಸಿ ಬಂಡೀಪುರ ಸಫಾರಿಯಲ್ಲಿ‌ ಸೋಮವಾರದ ನಂತರ ಈ ನೂತನ‌ ಆದೇಶ ಜಾರಿ ಮಾಡಲಾಗುವುದು ಎಂದು ತಿಳಿಸಿದರು.

ಹುಲಿ ಸಂರಕ್ಷಿತ ಪ್ರದೇಶದ ಕೋರ್‌ ಪ್ರದೇಶಗಳಲ್ಲಿ ಮೊಬೈಲ್‌ ಬಳಕೆಗೆ ಅನುಮತಿ ಇಲ್ಲ. ಅದರಂತೆ, ವನ್ಯಜೀವಿ ಸಫಾರಿಯಲ್ಲಿ ಚಾಲಕರು, ಪ್ರವಾಸಿಗರು ಮತ್ತು ಗೈಡ್​ಗಳು ತಮ್ಮ ಮೊಬೈಲ್ ಫೋನ್​ಗಳನ್ನು ಏರೋಪ್ಲೇನ್ ಮೋಡ್​ನಲ್ಲಿರಿಸಿ ದೃಶ್ಯಗಳನ್ನು ಸೆರೆ ಹಿಡಿಯಲು ಅವಕಾಶ ಕಲ್ಪಿಸಲಾಗಿತ್ತು. ಮುಂದುವರೆದು, ಕಳೆದ ಸೆಪ್ಟಂಬರ್​ 15 ರಂದು ಎನ್‌ಟಿಸಿಎ ಕಾರ್ಯದರ್ಶಿ ಜೊತೆ ಸಭೆ ನಡೆಸಿ ರಾಜ್ಯದ ಕೋರ್ ಭಾಗಗಳಲ್ಲಿನ ಪ್ರವಾಸೋದ್ಯಮ ವಲಯಗಳಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಅಕ್ಟೋಬರ್​ 9 ರಂದು ಹೊರಡಿಸಿರುವ ಆದೇಶದಲ್ಲಿ ಪಿಸಿಸಿಎಫ್ ಕುಮಾರ್ ಪುಷ್ಕರ್ ತಿಳಿಸಿದ್ದಾರೆ.

Must Read