ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರವಾಗಿ ಗುಡುಗಿದ್ದು, ಅ.12 ರ ಸೋಮವಾರದಂದು ಕಾಂಗ್ರೆಸ್, ‘ಇಂಡಿ ಒಕ್ಕೂಟ’ ಹಾಗೂ ದೇಶದ ಯುವ ಸಮೂಹ ಒಟ್ಟಾಗಿ ದೆಹಲಿಯ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಲಿವೆ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಶನಿವಾರ ಸಿಜೆಪಿ ಹಮ್ಮಿಕೊಂಡಿದ್ದ ಧರಣಿಯ ವೇಳೆ ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಮೇಲೆ ದೆಹಲಿ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರು ಭಾರಿ ಹಿಂಸಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಈ ಜಂಟಿ ಹೋರಾಟಕ್ಕೆ ಕರೆ ನೀಡಲಾಗಿದೆ.
ಶನಿವಾರ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿಗೆ ‘ಮೊಗಾಂಬೊ’ ಎಂದ ರಾಹುಲ್ ಗಾಂಧಿ
‘ಮಿಸ್ಟರ್ ಇಂಡಿಯಾ’ ಚಲನಚಿತ್ರದ ಕುಖ್ಯಾತ ಖಳನಾಯಕ ‘ಮೊಗಾಂಬೊ’ ಪಾತ್ರಕ್ಕೆ ಪ್ರಧಾನಿಯವರನ್ನು ಹೋಲಿಸಿರುವ ರಾಹುಲ್ ಗಾಂಧಿ, ‘ಮೊಗಾಂಬೊ ಮೋದಿ’ ಅವರು ಚುನಾವಣೆಗಳನ್ನು ಕದಿಯುವ ಮೂಲಕ ಮತ್ತು ಸಾರ್ವಜನಿಕರ ಧ್ವನಿಯನ್ನು ಹತ್ತಿಕ್ಕುವ ಮೂಲಕ ಭಾರತದ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಧ್ವಂಸಗೊಳಿಸಿದ್ದಾರೆ. ಈ ‘ಮೊಗಾಂಬೊ’ ಮತ್ತು ಅವರ ಸರ್ಕಾರ ಯುವಕರನ್ನು ಎಷ್ಟು ಹತ್ತಿಕ್ಕಲು ಪ್ರಯತ್ನಿಸುತ್ತದೆಯೋ, ಅಷ್ಟೇ ತೀವ್ರವಾಗಿ ದೇಶದ ವಿದ್ಯಾರ್ಥಿಗಳ ಹಾಗೂ Gen Zಗಳ ಆಕ್ರೋಶದ ಜ್ವಾಲೆ ಹೆಚ್ಚಾಗಲಿದೆ. ಕಳೆದ 10-15 ವರ್ಷಗಳಿಂದ ಮೋದಿ ಆಡುತ್ತಾ ಬಂದಿರುವ ರಾಜಕೀಯ ಆಟ ಈಗ ಮುಗಿದಿದೆ, ವಿರೋಧ ಪಕ್ಷಗಳು ಅವರನ್ನು ಎಲ್ಲಾ ಕಡೆಯಿಂದಲೂ ಸುತ್ತುವರೆದಿವೆ ಎಂಬುದನ್ನು ಅವರು ಅರಿತಿಲ್ಲ ಎಂದು ಕಿಡಿಕಾರಿದ್ದಾರೆ.
ಅಮಿತ್ ಶಾ ಅವರ ಪೊಲೀಸರಿಂದ ಗೂಂಡಾಗಿರಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನೇರವಾಗಿ ಗುರಿಯಾಗಿಸಿದ ರಾಹುಲ್, ಅಮಿತ್ ಶಾ ಅವರ ದೆಹಲಿ ಪೊಲೀಸರು ತಾವೇ ಖುದ್ದಾಗಿ ಗೂಂಡಾಗಿರಿ ನಡೆಸುತ್ತಿರುವುದಲ್ಲದೆ, ಬಿಜೆಪಿಯ ಗೂಂಡಾಗಳಿಗೆ ಮಹಿಳೆಯರು ಹಾಗೂ ಯುವಕರ ಮೇಲೆ ಹಲ್ಲೆ ಮಾಡಲು ಮುಕ್ತ ಅವಕಾಶ ಮತ್ತು ಪ್ರೋತ್ಸಾಹ ನೀಡುತ್ತಿದ್ದಾರೆ. ಇಡೀ ನಗರವನ್ನು ಬಂದ್ ಮಾಡಿ, ಇಂಟರ್ನೆಟ್ ಸ್ಥಗಿತಗೊಳಿಸಿ, ವಿದ್ಯಾರ್ಥಿಗಳನ್ನು ಅಟ್ಟಾಡಿಸಿ ಹೊಡೆಯಲಾಗಿದೆ. ಅಮಿತ್ ಶಾ ಅವರೇ, ನೀವು 10 ಸಾವಿರ, 20 ಸಾವಿರ ಅಥವಾ 40 ಸಾವಿರ ಪೊಲೀಸರನ್ನಾದರೂ ಕರೆತನ್ನಿ, ನಿಮ್ಮ ಗೂಂಡಾಗಳನ್ನು ಕರೆಸಿಕೊಳ್ಳಿ, ನಾವು ಇದಕ್ಕೆಲ್ಲಾ ಹೆದರುವುದಿಲ್ಲ, ನಮ್ಮ ಹೋರಾಟ ನಿಲ್ಲುವುದೂ ಇಲ್ಲ ಎಂದು ಸವಾಲು ಹಾಕಿದ್ದಾರೆ.
ಸೋಮವಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಭೇಟಿ
ದಿಢೀರ್ ಬೆಳವಣಿಗೆಯೊಂದರಲ್ಲಿ, ದೆಹಲಿಯ ಬೀದಿಗಳಲ್ಲಿ ಸಂವಿಧಾನವನ್ನು ಹರಿದು ಹಾಕಲಾಗುತ್ತಿದ್ದು, ಪ್ರಜಾಪ್ರಭುತ್ವವನ್ನು ಕಾಲಕಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಈ ದೌರ್ಜನ್ಯದ ವಿರುದ್ಧ ನ್ಯಾಯ ಕೇಳಲು ನಾಳೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ. ಕಾನೂನಿನ ರಕ್ಷಕರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ, ಈ ದೌರ್ಜನ್ಯ ಎಸಗಿದವರಿಂದ ನಾವು ಖಂಡಿತವಾಗಿಯೂ ಉತ್ತರದಾಯಿತ್ವವನ್ನು ಪಡೆದೇ ತೀರುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಶನಿವಾರ ದೆಹಲಿಯಲ್ಲಿ ನಡೆದಿದ್ದ ಪ್ರತಿಭಟನೆಯ ವೇಳೆ ಸಿಜೆಪಿ ನಾಯಕರಾದ ಅಭಿಜೀತ್ ದಿಪ್ಕೆ, ಅಶುತೋಷ್ ರಂಕಾ ಅವರನ್ನು ಬಂಧಿಸಲಾಗಿತ್ತು. ಇದರ ಜೊತೆಗೆ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್, ಸಿಪಿಐ(ಎಂ) ನಾಯಕ ಪಿಣರಾಯಿ ವಿಜಯನ್ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸೇರಿದಂತೆ ದೇಶದ ಪ್ರಮುಖ ವಿರೋಧ ಪಕ್ಷಗಳ ನಾಯಕರು ಹಾಗೂ ಸುಮಾರು 1,000 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇಡೀ ದೆಹಲಿ ಸದ್ಯ ರಣರಂಗವಾಗಿ ಮಾರ್ಪಟ್ಟಿದೆ.



