ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಸಮಗ್ರ ಅಭಿವೃದ್ಧಿಗೆ ಹೊಸ ವೇಗ ನೀಡಲುಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾಜ್ಯಾದ್ಯಂತ 13,000 ಕೋಟಿಗೂ ಅಧಿಕ ಮೌಲ್ಯದ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಸ್ತೆ, ರೈಲ್ವೆ, ಮೆಟ್ರೋ, ಬಂದರು ಮತ್ತು ವೈಜ್ಞಾನಿಕ ಸಂಶೋಧನಾ ವಲಯ ಸೇರಿದಂತೆ ಹಲವು ಪ್ರಮುಖ ರಂಗಗಳಿಗೆ ಈ ಯೋಜನೆಗಳು ಹೊಸ ಶಕ್ತಿ ತುಂಬಲಿವೆ.
ಚೆನ್ನೈ ಮೆಟ್ರೋದಿಂದ ಪ್ರವಾಸ ಆರಂಭ
ಪ್ರಧಾನಿ ಮೋದಿ ಅವರು ಬೆಳಗ್ಗೆ 11:30 ಕ್ಕೆ ಚೆನ್ನೈ ಮೆಟ್ರೋದ ಫೇಸ್-2 ಅಡಿಯಲ್ಲಿ ಪೊರೂರ್ ಬೈಪಾಸ್ ನಿಲ್ದಾಣದಿಂದ ಪೂನಮಲ್ಲಿ ಬೈಪಾಸ್ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಖುದ್ದು ಪ್ರಯಾಣ ನಡೆಸಲಿದ್ದಾರೆ. 4,900 ಕೋಟಿ ವೆಚ್ಚದ ಈ ಮಾರ್ಗವು ವಿಶೇಷವಾದ 3.7 ಕಿ.ಮೀ.ಉದ್ದದ ‘ಡಬಲ್ ಡೆಕ್ಕರ್’ ರಚನೆ ಮತ್ತು ಚಾಲಕರಹಿತ ಕಾರ್ಯಾಚರಣೆಗೆ ಬೆಂಬಲ ನೀಡುವ ಅತ್ಯಾಧುನಿಕ ಸಿಗ್ನಲಿಂಗ್ ವ್ಯವಸ್ಥೆಯನ್ನು ಹೊಂದಿದೆ.
ದೇವಾಲಯ ದರ್ಶನ
ನಂತರ ಮಧ್ಯಾಹ್ನ 12:15 ಕ್ಕೆ ಚೆನ್ನೈನ ಪ್ರಸಿದ್ಧ ಶ್ರೀ ಜಲಕಂಠೇಶ್ವರರ್ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮತ್ತು ದರ್ಶನ ಪಡೆಯಲಿದ್ದಾರೆ. ತದನಂತರ ಐಐಟಿ ಮದ್ರಾಸ್ನ ಬ್ರೈನ್ ಸೆಂಟರ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
13,000 ಕೋಟಿಗೂ ಮೌಲ್ಯದ ಮೆಗಾ ಯೋಜನೆಗಳ ಹಬ್ಬ
ಪ್ರಧಾನಿಯವರು ಮಧ್ಯಾಹ್ನ 1:30 ಕ್ಕೆ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ ತಮಿಳುನಾಡಿನ ಪ್ರಮುಖ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ ಮತ್ತು ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಭಾಷಣ ಮಾಡಲಿದ್ದಾರೆ.
ರಾಜ್ಯದ ರಸ್ತೆ ಸಂಪರ್ಕವನ್ನು ಬಲಪಡಿಸಲು ಮತ್ತು ಸಂಚಾರ ದಟ್ಟಣೆ ಕಡಿಮೆ ಮಾಡಲು ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇದರಲ್ಲಿ NH-744 ರ 36 ಕಿಮೀ ಉದ್ದದ ವಡುಗಪಟ್ಟಿ-ತೆರ್ಕುವೆಂಗನಲ್ಲೂರು ಚತುಷ್ಪಥ ರಸ್ತೆ ಮತ್ತು ಮಧುರೈ ನಗರದ ದಟ್ಟಣೆ ನಿಯಂತ್ರಿಸುವ 30 ಕಿಮೀ ಉದ್ದದ ಮಧುರೈ ರಿಂಗ್ ರೋಡ್ (NH-744A) ಸೇರಿವೆ. ಜೊತೆಗೆ NH-83 ರ ತಿರುವಾರೂರು ಬೈಪಾಸ್ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮುಕ್ಕಾಲು ಶತಮಾನದ ಕನಸಾಗಿದ್ದ ಕಾರೈಕಲ್-ಪೆರಾಲಂ ರೈಲು ಮಾರ್ಗವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಇದರೊಂದಿಗೆ ಕೊಯಮತ್ತೂರು ಭಾಗದಲ್ಲಿ ಮೂರು ರೈಲ್ವೆ ಫ್ಲೈಓವರ್ಗಳು ಲೋಕಾರ್ಪಣೆಯಾಗಲಿದ್ದು, ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ನವೀಕರಿಸಲಾದ ಪಳನಿ, ವೆಲ್ಲೂರು ಕಂಟೋನ್ಮೆಂಟ್, ಅಂಬಾಸಮುದ್ರಂ, ಪರಮಕುಡಿ ಮತ್ತು ನಾಮಕ್ಕಲ್ನ 5 ‘ಅಮೃತ್ ಸ್ಟೇಷನ್’ಗಳನ್ನು ಉದ್ಘಾಟಿಸಲಿದ್ದಾರೆ.
ಚೆನ್ನೈ ಬಂದರಿನಲ್ಲಿ ಸುಧಾರಿತ ಕ್ರೂಸ್ ಟರ್ಮಿನಲ್, ಗೋದಾಮುಗಳು ಸೇರಿದಂತೆ ನಾಲ್ಕು ಯೋಜನೆಗಳು ಮತ್ತು ವಿ.ಓ. ಚಿದಂಬರನಾರ್ ಬಂದರಿನಲ್ಲಿ ಸ್ವಚ್ಛ ಇಂಧನ ಹಾಗೂ ಕಂಟೇನರ್ ಸಾಮರ್ಥ್ಯ ಹೆಚ್ಚಿಸುವ 8 ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಕಾಮರಾಜರ್ ಬಂದರಿನಲ್ಲಿ ಕಂಟೇನರ್ ಟರ್ಮಿನಲ್ ಹಂತ-1 ಮತ್ತು ಹಂತ-2 ರ ಬೃಹತ್ ಡ್ರೆಜ್ಜಿಂಗ್ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (CPCL) ನ ಮನಾಲಿ ರಿಫೈನರಿಯಲ್ಲಿ ಜಾಗತಿಕ ಗುಣಮಟ್ಟದ ಪ್ರೀಮಿಯಂ ಲೂಬ್ರಿಕಂಟ್ಗಳನ್ನು ತಯಾರಿಸಲು ಬೇಕಾದ ‘ಗ್ರೂಪ್ II/III ಲೂಬ್ ಆಯಿಲ್ ಬೇಸ್ ಸ್ಟಾಕ್ಸ್’ (LOBS) ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ವೈಜ್ಞಾನಿಕ ಕ್ರಾಂತಿ
ಪ್ರಧಾನಿಯವರು ಐಐಟಿ ಮದ್ರಾಸ್ನ ‘ಸುಧಾ ಗೋಪಾಲಕೃಷ್ಣನ್ ಬ್ರೈನ್ ಸೆಂಟರ್’ (SGBC) ಅನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಮಾನವನ ಭ್ರೂಣದ ಹಂತದಿಂದ ಹಿಡಿದು ವೃದ್ಧಾಪ್ಯದವರೆಗಿನ 100 ಕ್ಕೂ ಹೆಚ್ಚು ಮಾನವ ಮಿದುಳುಗಳನ್ನು ಕೋಶ ಮಟ್ಟದಲ್ಲಿ ತ್ರೀ-ಡೈಮೆನ್ಷನಲ್ (3D) ಅಟ್ಲಾಸ್ ಆಗಿ ನಕ್ಷೆ ಮಾಡುವ ವಿಶ್ವದ ಮೊದಲ ಜಾಗತಿಕ ವೈಜ್ಞಾನಿಕ ಮಿಷನ್ ಅನ್ನು ಅವರು ಪ್ರಾರಂಭಿಸಲಿದ್ದಾರೆ. ಜೊತೆಗೆ ಪಾರ್ಶ್ವವಾಯು ಸಂಶೋಧನೆಗೆ ನೆರವಾಗುವ ವಿಶಿಷ್ಟ ‘C-STROKE’ ಮಾನವ ಇಸ್ಕೆಮಿಕ್ ಸ್ಟ್ರೋಕ್ ಅಟ್ಲಾಸ್ ಅನ್ನು ಬಿಡುಗಡೆ ಮಾಡಲಿದ್ದಾರೆ.
ಇದನ್ನೂ ಓದಿ:
ಕೊನೆಯದಾಗಿ, ಮಧ್ಯಾಹ್ನ 3 ಗಂಟೆಗೆ ಚೆನ್ನೈನ ಪ್ರತಿಷ್ಠಿತ ‘ಜೈಗೋಪಾಲ್ ಗರೋಡಿಯಾ ಹಿಂದೂ ವಿದ್ಯಾಲಯ’ ಮೆಟ್ರಿಕ್ಯುಲೇಶನ್ ಹೈಯರ್ ಸೆಕೆಂಡರಿ ಶಾಲೆಯ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಭಾಗವಹಿಸಿ ಯುವ ಪೀಳಿಗೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ತಮಿಳುನಾಡಿನ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದ ಹೂಡಿಕೆಯ ಯೋಜನೆಗಳು ಏಕಕಾಲಕ್ಕೆ ಜಾರಿಯಾಗುತ್ತಿರುವುದು ಭಾರಿ ಆಶಾಭಾವನೆ ಮೂಡಿಸಿದೆ.



