ಹೊಸದಿಗಂತ ವರದಿ ಉಳ್ಳಾಲ:
ಗೆಳೆಯರೊಂದಿಗೆ ಶನಿವಾರ ಸಂಜೆ ಇಲ್ಲಿನ ಸೋಮೇಶ್ವರದ ಪೆರಿಬೈಲ್ ಸಮುದ್ರಕಿನಾರೆಗೆ ತೆರಳಿ ನೀರಾಟವಾಡುತ್ತಿದ್ದ ಸಂದರ್ಭ ಸಮುದ್ರಪಾಲಾಗಿದ್ದ ಉಜಿರೆಯ ಖಾಸಗಿ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಮ್ಮರಡಿ ನಿವಾಸಿ ಶೋಭಿತ್ ಎಂ. ಗೌಡ (18) ಇಂದು ಪೆರಿಬೈಲ್ ಸಮುದ್ರ ತೀರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಉಜಿರೆ ಎಸ್ ಡಿಎಂ ಕಾಲೇಜಿನ ಒಂಭತ್ತು ಮಂದಿ ವಿದ್ಯಾರ್ಥಿಗಳು ಶನಿವಾರದಂದು ಕುತ್ತಾರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಸಂಜೆ ವೇಳೆ ಸೋಮೇಶ್ವರದ ಪೆರಿಬೈಲ್ ಬೀಚ್ ಗೆ ತೆರಳಿದ್ದರು. ಈ ವೇಳೆ ಶೋಭಿತ್ ಮತ್ತು ಆಕಾಶ್ ಎಂಬವರು ಸಮುದ್ರದಲ್ಲಿ ನೀರಾಟಕ್ಕಿಳಿದಿದ್ದು, ಅಲೆಗಳ ರಭಸಕ್ಕೆ ಇಬ್ಬರೂ ನೀರು ಪಾಲಾಗಿದ್ದರು. ಆಕಾಶ್ ಈಜು ತಿಳಿದಿದ್ದ ಕಾರಣ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದನು.
ಸಮುದ್ರ ಪಾಲಾಗಿದ್ದ ವಿದ್ಯಾರ್ಥಿ ಶೋಭಿತ್ ಗಾಗಿ ತಡರಾತ್ರಿವರೆಗೂ ಹುಡುಕಾಟ ನಡೆಸಲಾಗಿತ್ತು. ಎಸ್ ಡಿಆರ್ ಎಫ್, ಕರಾವಳಿ ಕಾವಲು ಪಡೆ, ಗೃಹ ರಕ್ಷಕ ದಳ, ಉಳ್ಳಾಲ ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿಸಿದ್ದರು.
ಇದನ್ನೂ ಓದಿ:
ಇಂದು ಮಧ್ಯಾಹ್ನದ ವೇಳೆ ಉಳ್ಳಾಲ ವಲಯ ನಾಡ ದೋಣಿ ಹಾಗೂ ಗಿಲ್ನೆಟ್ ಮೀನುಗಾರರ ಸಂಘದ ಪ್ರಮುಖರಾದ ಆಸಿಫ್ ಎಮ್.ಬಿ, ನಿಝಾಮ್ ಕೋಟೆಪುರ, ನಝೀರ್ ಕೋಡಿ, ರಝಾಕ್ ಕೋಟೆಪುರ, ಮುಸ್ತಾಫ ಕೋಟೆಪುರ, ಇರ್ಫಾನ್ ಕೋಟೆಪುರ ಅವರುಗಳು ತುರ್ತು ನಾಡ ದೋಣಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಉಚ್ಚಿಲ ಪೆರಿಬೈಲ್ ಸಮುದ್ರದಲ್ಲಿ ಶೋಭಿತ್ ನ ಮೃತದೇಹವನ್ನ ಪತ್ತೆ ಮಾಡಿದ್ದಾರೆ.
ತುರ್ತು ನಾಡ ದೋಣಿಯಲ್ಲೇ ಕೋಟೆಪುರ ಸಮುದ್ರ ತೀರಕ್ಕೆ ತರಲಾಗಿದ್ದ ಮೃತದೇಹವನ್ನು ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಪ್ರಕರಣ ದಾಖಲಿಸಿದ್ದಾರೆ. ಮೃತ ಶೋಭಿತ್ ಪೋಷಕರಿಗೆ ಏಕೈಕ ಮಗನೆಂಬ ಮಾಹಿತಿ ಲಭ್ಯವಾಗಿದೆ.



