ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ ವಿರಾಮ ನೀಡುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ ಮಾಡಿದ್ದಾರೆ. ಉಭಯ ರಾಷ್ಟ್ರಗಳ ನಡುವೆ ತಕ್ಷಣದಿಂದಲೇ ಇಂಧನ ಮೂಲಸೌಕರ್ಯಕ್ಕೆ ಸಂಬಂಧಿಸಿದ ಕದನ ವಿರಾಮ ಜಾರಿಗೆ ಬಂದಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಆದರೆ, ಟ್ರಂಪ್ ಅವರ ಈ ಘೋಷಣೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೇ ಅಚ್ಚರಿ ಮೂಡಿಸಿದ್ದು, “ಇದು ನನಗೆ ಹೊಸ ಸುದ್ದಿ” ಎಂದು ಪ್ರತಿಕ್ರಿಯಿಸಿದ್ದಾರೆ.
ಟ್ರಂಪ್ ಅವರು ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಷಿಯಲ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ದಾಳಿಗಳನ್ನು ನಿಲ್ಲಿಸಲು ಒಪ್ಪಿಕೊಂಡಿವೆ ಎಂದು ತಿಳಿಸಿರುವ ಅವರು, ಈ ಒಪ್ಪಂದವನ್ನು ಉಲ್ಲಂಘಿಸದಂತೆ ಎರಡೂ ದೇಶಗಳಿಗೆ ಮನವಿ ಮಾಡಿದ್ದಾರೆ. ಆದರೆ, ಕದನ ವಿರಾಮದ ಅವಧಿ ಎಷ್ಟು ದಿನ ಇರಲಿದೆ, ಯಾವ ನಿಯಮಗಳ ಅಡಿಯಲ್ಲಿ ಇದು ಜಾರಿಗೆ ಬರಲಿದೆ ಎಂಬ ಬಗ್ಗೆ ಅವರು ಸ್ಪಷ್ಟ ವಿವರಗಳನ್ನು ನೀಡಿಲ್ಲ. ರಷ್ಯಾ ಸರ್ಕಾರದಿಂದಲೂ ತಕ್ಷಣಕ್ಕೆ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿಲ್ಲ.
ಇದನ್ನೂ ಓದಿ:
ಝೆಲೆನ್ಸ್ಕಿ ಹೇಳಿದ್ದೇನು?
ಈ ಕುರಿತು ಪ್ರತಿಕ್ರಿಯಿಸಿರುವ ಝೆಲೆನ್ಸ್ಕಿ, ರಷ್ಯಾ ನಿಜವಾಗಿಯೂ ಇಂಧನ ಮೂಲಸೌಕರ್ಯದ ಮೇಲಿನ ದಾಳಿಗಳನ್ನು ನಿಲ್ಲಿಸಲು ಒಪ್ಪಿದರೆ ಉಕ್ರೇನ್ ಕೂಡ ಸಹಕರಿಸಲು ಸಿದ್ಧವಿದೆ ಎಂದಿದ್ದಾರೆ. ಟ್ರಂಪ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದರೆ, ಕದನ ವಿರಾಮ ಯಾವಾಗ ಆರಂಭವಾಗಲಿದೆ ಎಂಬುದನ್ನು ತಿಳಿಸಬೇಕು ಎಂದು ಅವರು ಹೇಳಿದ್ದಾರೆ. ಅಮೆರಿಕದಿಂದ ಅಧಿಕೃತ ಮಾಹಿತಿ ಮತ್ತು ಮುಂದಿನ ಕ್ರಮಗಳ ವಿವರಗಳನ್ನು ಉಕ್ರೇನ್ ನಿರೀಕ್ಷಿಸುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಯುದ್ಧದ ನಡುವೆಯೇ ಉಕ್ರೇನ್‌ನಲ್ಲಿ ಹೊಸ ನಾಯಕತ್ವ ಬೇಕೆಂದು ಟ್ರಂಪ್ ನೀಡಿದ್ದ ಹೇಳಿಕೆಗೂ ಝೆಲೆನ್ಸ್ಕಿ ತಿರುಗೇಟು ನೀಡಿದ್ದಾರೆ. ದೇಶದ ನಾಯಕನನ್ನು ಆಯ್ಕೆ ಮಾಡುವ ಅಧಿಕಾರ ಉಕ್ರೇನ್ ಜನರಿಗೇ ಸೇರಿದ್ದು, ಅದು ಅವರ ನಿರ್ಧಾರ ಎಂದು ಸ್ಪಷ್ಟಪಡಿಸಿದ್ದಾರೆ. ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಕಷ್ಟಕರವಾಗಿದ್ದು, ಮತದಾನಕ್ಕೆ ಅಗತ್ಯವಾದ ಭದ್ರತೆ ಮತ್ತು ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ ಎಂದಿದ್ದಾರೆ.
ಇದಕ್ಕೂ ಮೊದಲು, ರಷ್ಯಾ ಉಕ್ರೇನ್‌ನ ಇಂಧನ ಮೂಲಸೌಕರ್ಯದ ಮೇಲಿನ ದಾಳಿಗಳನ್ನು ನಿಲ್ಲಿಸಿದರೆ, ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲಿನ ದಾಳಿಗಳನ್ನು ತಡೆಯಲು ಉಕ್ರೇನ್ ಸಿದ್ಧವಿದೆ ಎಂದು ಝೆಲೆನ್ಸ್ಕಿ ಹೇಳಿದ್ದರು. ಎರಡೂ ದೇಶಗಳು ಪರಸ್ಪರ ಸಮಾನವಾಗಿ ನಡೆದುಕೊಂಡಾಗ ಮಾತ್ರ ಉದ್ವಿಗ್ನತೆ ಕಡಿಮೆಯಾಗಲು ಸಾಧ್ಯ ಎಂಬುದು ಉಕ್ರೇನ್‌ನ ನಿಲುವಾಗಿದೆ.



