ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಫ್ರಿಕಾದ ಜಿಬೌಟಿ ಕರಾವಳಿಯ ಸಮೀಪ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿಬಿದ್ದ ಪರಿಣಾಮ ಕನಿಷ್ಠ 109 ಮಂದಿ ಮೃತಪಟ್ಟಿದ್ದು, 116ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಮೃತರಲ್ಲಿ 15 ಮಕ್ಕಳು ಸೇರಿದ್ದಾರೆ ಎಂದು ವಿಶ್ವಸಂಸ್ಥೆಯ ವಲಸೆ ಸಂಸ್ಥೆ (IOM) ತಿಳಿಸಿದೆ.
300ಕ್ಕೂ ಹೆಚ್ಚು ಜನರಿದ್ದ ದೋಣಿ ದುರಂತ
IOM ಭಾನುವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಜಿಬೌಟಿಯಿಂದ ಯೆಮನ್ ಕಡೆಗೆ ಪ್ರಯಾಣಿಸುತ್ತಿದ್ದ ದೋಣಿಯಲ್ಲಿ 300ಕ್ಕೂ ಹೆಚ್ಚು ಜನರಿದ್ದರು. ಜಿಬೌಟಿಯ ಪೂರ್ವ ಕರಾವಳಿಯ ಗುಹೆರೆ ಸಮೀಪ ಈ ದುರಂತ ಸಂಭವಿಸಿದೆ. ಈ ಪ್ರದೇಶವು ಏಡನ್ ಕೊಲ್ಲಿ ಮತ್ತು ಬಾಬ್ ಅಲ್-ಮಂದೆಬ್ ಜಲಸಂಧಿಯ ಸಮೀಪದಲ್ಲಿದೆ.
ದೋಣಿ ದುರಂತದಲ್ಲಿ 80ಕ್ಕೂ ಹೆಚ್ಚು ಮಂದಿ ಬದುಕುಳಿದಿದ್ದು, ಅವರೆಲ್ಲರೂ ಇಥಿಯೋಪಿಯಾ ಮೂಲದವರು ಎಂದು ವರದಿಯಾಗಿದೆ. ನಾಪತ್ತೆಯಾದವರ ಪತ್ತೆಗಾಗಿ ಜಿಬೌಟಿ ಅಧಿಕಾರಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಇದನ್ನೂ ಓದಿ:
ರಕ್ಷಣಾ ಕಾರ್ಯಕ್ಕೆ IOM ನೆರವು
ಘಟನೆ ಕುರಿತು ವಿಷಾದ ವ್ಯಕ್ತಪಡಿಸಿರುವ ಜಿಬೌಟಿಯಲ್ಲಿನ IOM ಮುಖ್ಯಸ್ಥ ಅಲೆಕ್ಸಾಂಡ್ರೆ ಕೊಯಿಸಾಕ್, ಸ್ಥಳೀಯ ಅಧಿಕಾರಿಗಳೊಂದಿಗೆ ಸಂಸ್ಥೆಯ ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಬದುಕುಳಿದವರಿಗೆ ತುರ್ತು ನೆರವು ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 10ರಿಂದ ಇಥಿಯೋಪಿಯಾದಿಂದ ಜಿಬೌಟಿಗೆ 20,000ಕ್ಕೂ ಹೆಚ್ಚು ಜನರು ಬಂದಿರುವುದಾಗಿ IOM ತಿಳಿಸಿದೆ. ಕಳೆದ ವರ್ಷ ಈ ವಲಸೆ ಮಾರ್ಗದಲ್ಲಿ ಕನಿಷ್ಠ 900 ಮಂದಿ ಮೃತಪಟ್ಟಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ ಎಂದು ಸಂಸ್ಥೆಯ ಅಂಕಿಅಂಶಗಳು ಸೂಚಿಸುತ್ತವೆ.



