ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾರದೀಯ ನವರಾತ್ರಿಯ ಎರಡನೇ ದಿನದಂದು ಜಗನ್ಮಾತೆಯನ್ನು ‘ಬ್ರಹ್ಮಚಾರಿಣಿ’ ರೂಪದಲ್ಲಿ ಪೂಜಿಸಲಾಗುತ್ತದೆ. ‘ಬ್ರಹ್ಮ’ ಎಂದರೆ ತಪಸ್ಸು, ‘ಚಾರಿಣಿ’ ಎಂದರೆ ಆಚರಿಸುವವಳು. ಅಂದರೆ, ಕಠಿಣ ತಪಸ್ಸನ್ನು ಆಚರಿಸಿ ಈಶ್ವರನನ್ನು ಒಲಿಸಿಕೊಂಡ ಪರಮ ಪಾವನ ಸ್ವರೂಪವೇ ಮಾ ಬ್ರಹ್ಮಚಾರಿಣಿ. ಬಲಗೈಯಲ್ಲಿ ಜಪಮಾಲೆ ಹಾಗೂ ಎಡಗೈಯಲ್ಲಿ ಕಮಂಡಲವನ್ನು ಹಿಡಿದು ಶಾಂತ ಚಿತ್ತಳಾಗಿ ಕಂಗೊಳಿಸುವ ಈ ದೇವಿಯ ಆರಾಧನೆಯು ಪ್ರತಿಯೊಬ್ಬ ಭಕ್ತನ ಜೀವನದಲ್ಲೂ ಸದ್ಬುದ್ಧಿ, ಶಕ್ತಿ ಮತ್ತು ಏಕಾಗ್ರತೆಯನ್ನು ತುಂಬುತ್ತದೆ.
ತ್ಯಾಗ ಮತ್ತು ಸಹನೆಗೆ ಪ್ರೇರಣೆ
ಶಿವನನ್ನು ಪತಿಯಾಗಿ ಪಡೆಯಲು ಪಾರ್ವತಿ ದೇವಿಯು ಸಾವಿರಾರು ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದಳು. ಈ ಕಾರಣದಿಂದಲೇ ಆಕೆಗೆ ‘ಬ್ರಹ್ಮಚಾರಿಣಿ’ ಮತ್ತು ‘ಅಪರ್ಣಾ’ ಎಂಬ ಹೆಸರುಗಳು ಬಂದವು. ಜೀವನದಲ್ಲಿ ಎಷ್ಟೇ ಕಷ್ಟ-ಸವಾಲುಗಳು ಬಂದರೂ ಧೃತಿಗೆಡದೆ, ಅಚಲ ಶ್ರದ್ಧೆಯಿಂದ ಮುನ್ನಡೆದರೆ ಅಂದುಕೊಂಡ ಗುರಿಯನ್ನು ತಲುಪಬಹುದು ಎಂಬುದನ್ನು ದೇವಿಯ ಈ ಸ್ವರೂಪ ನಮಗೆ ಕಲಿಸಿಕೊಡುತ್ತದೆ. ವಿದ್ಯಾರ್ಥಿಗಳಿಗೆ, ಸಾಧಕರಿಗೆ ಹಾಗೂ ಧರ್ಮಮಾರ್ಗದಲ್ಲಿ ನಡೆಯುವವರಿಗೆ ಈಕೆಯ ಆಶೀರ್ವಾದ ಅತ್ಯಗತ್ಯ.
ಪೂಜಾ ಮಹತ್ವ
ಮಾ ಬ್ರಹ್ಮಚಾರಿಣಿ ಪೂಜೆಯಿಂದ ಮನುಷ್ಯನಲ್ಲಿರುವ ಅಹಂಕಾರ, ಆಲಸ್ಯ ಮತ್ತು ಕ್ರೋದ ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಯಾವುದೇ ಹಠ ಹಾಗೂ ತಪಸ್ಸಿನ ಶಕ್ತಿಯನ್ನು ವೃದ್ಧಿಸುವ ದೇವಿಯ ಆರಾಧನೆಯಿಂದ ನಾವು ಕೈಗೊಳ್ಳುವ ಕೆಲಸಗಳಲ್ಲಿ ಯಶಸ್ಸು ಲಭಿಸುತ್ತದೆ.
ದೇವಿಯು ಜ್ಞಾನದ ಸಂಕೇತವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಿ ಅಭ್ಯಾಸದಲ್ಲಿ ಸಾಫಲ್ಯ ದೊರೆಯುತ್ತದೆ.
ಈ ದಿನದಂದು ಮುಂಜಾನೆ ಬೇಗ ಎದ್ದು, ಬಿಳಿ ವಸ್ತ್ರಗಳನ್ನು ಧರಿಸಿ ದೇವಿಗೆ ಪೂಜೆ ಸಲ್ಲಿಸುವುದು ಶ್ರೇಷ್ಠ. ದೇವಿಗೆ ಸಕ್ಕರೆ, ಪಂಚಾಮೃತ ಹಾಗೂ ಬಿಳಿ ಬಣ್ಣದ ಸಿಹಿ ತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಬಿಳಿ ಹೂವುಗಳು ಹಾಗೂ ಕಮಲದ ಹೂವಿನಿಂದ ದೇವಿಯನ್ನು ಅಲಂಕರಿಸಿ ಪ್ರಾರ್ಥಿಸಿದರೆ ತಾಯಿಯು ಒಲಿಯುತ್ತಾಳೆ ಎಂಬ ನಂಬಿಕೆಯಿದೆ.



