November 4, 2026
Wednesday, November 4, 2026
spot_img

WEATHER | ರಾಜ್ಯಾದ್ಯಂತ ಮುಂದುವರಿಯಲಿದೆ ಒಣಹವೆ: ಎಲ್ಲಿಯೂ ಇಲ್ಲ ಮಳೆಯ ಮುನ್ಸೂಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಮಳೆರಾಯ ತಾತ್ಕಾಲಿಕವಾಗಿ ಮುನಿಸಿಕೊಂಡಿದ್ದು, ರಾಜ್ಯಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಒಣಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಕ್ಟೋಬರ್ ತಿಂಗಳು ಮುಗಿಯುತ್ತ ಬಂದರೂ ಬಿಸಿಲಿನ ಪ್ರಖರತೆ ಮಾತ್ರ ಕಡಿಮೆಯಾಗುತ್ತಿಲ್ಲ. ವಿಶೇಷವಾಗಿ ಕರಾವಳಿ ಭಾಗದಲ್ಲಿ ತೇವಾಂಶದಿಂದ ಕೂಡಿದ ಸೆಕೆ ವಾತಾವರಣವಿದ್ದರೆ, ಒಳನಾಡಿನ ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುವ ಸಾಧ್ಯತೆಯಿದೆ.

ಕರಾವಳಿಯಲ್ಲಿ ಸೆಕೆಯ ಅಬ್ಬರ

ಕರಾವಳಿಯ ಮೂರು ಪ್ರಮುಖ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಒಣಹವೆ ಮುಂದುವರಿಯಲಿದೆ. ಈ ಭಾಗದ ಜನರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮಧ್ಯಾಹ್ನದ ವೇಳೆ ಬಿಸಿಲಿಗೆ ನೇರವಾಗಿ ಹೋಗುವುದನ್ನು ತಪ್ಪಿಸುವುದು ಒಳ್ಳೆಯದು.

ಉತ್ತರ ಒಳನಾಡಿನಲ್ಲಿ ಮಳೆಯಿಲ್ಲ

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಒಣಹವೆ ಮುಂದುವರಿಯಲಿದೆ. ಈ ಎಲ್ಲಾ ಜಿಲ್ಲೆಗಳಲ್ಲೂ ಸದ್ಯಕ್ಕೆ ಮಳೆಯ ಮುನ್ಸೂಚನೆ ಇಲ್ಲದಿರುವುದರಿಂದ, ಹಗಲು ಹೊತ್ತಿನಲ್ಲಿ ಬಿಸಿಲಿನ ತೀವ್ರತೆ ಹೆಚ್ಚಿರಲಿದೆ.

ದಕ್ಷಿಣ ಒಳನಾಡಿನಲ್ಲೂ ಒಣಹವೆ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಕೋಲಾರ, ರಾಮನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ, ಚಿಕ್ಕಬಳ್ಳಾಪುರ ಹಾಗೂ ಕೊಡಗು ಸೇರಿದಂತೆ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇರಲಿದೆ. ಅಕ್ಟೋಬರ್ 13ರ ತನಕ ಈ ಎಲ್ಲ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯುವ ನಿರೀಕ್ಷೆಯಿದೆ.

Must Read