- ಎಸ್. ರುದ್ರೇಶ್ವರ
ಹೊಸದಿಗಂತ ವರದಿ ರಾಮನಗರ : ವಿಶ್ವವಿಖ್ಯಾತ ಮೈಸೂರು ದಸರಾ ವಿಜಯದಶಮಿ ಮೆರವಣಿಗೆಯಲ್ಲಿಈ ಬಾರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತವರು ಜಿಲ್ಲೆ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿದೆ. ರೇಷ್ಮೆ ನಾಡಿನ ಕಲೆ, ಸಂಸ್ಕೃತಿ, ಐತಿಹಾಸಿಕ ಪರಂಪರೆ, ಪ್ರವಾಸಿ ತಾಣಗಳು ಹಾಗೂ ಅಭಿವೃದ್ಧಿ ಸಾಧನೆಗಳನ್ನು ಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ಸಿಗದಿರುವುದು ಜಿಲ್ಲೆಯ ಜನರಿಗೆ ಬೇಸರ ತರಿಸಿದೆ.
ಪ್ರತಿ ಜಿಲ್ಲೆಯಿಂದ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಆಯಾ ಜಿಲ್ಲೆಯ ವೈಶಿಷ್ಟ್ಯ, ಸಾಧನೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವುದು ದಸರಾ ಮೆರವಣಿಗೆಯ ವಿಶೇಷತೆಯಾಗಿತ್ತು. ಆದರೆ ಈ ಬಾರಿ ರಾಜ್ಯದ 31 ಜಿಲ್ಲೆಗಳಿಂದ ಸಲ್ಲಿಕೆಯಾಗಿದ್ದ ಮಾದರಿಗಳ ಪೈಕಿ 15 ಜಿಲ್ಲೆಗಳ ಸ್ತಬ್ಧಚಿತ್ರಗಳಿ ಗೆ ಮಾತ್ರ ರಾಜ್ಯಮಟ್ಟದ ಆಯ್ಕೆ ಸಮಿತಿ ಅವಕಾಶ ನೀಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುಶ್ರೀ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ರಾಜ್ಯಮಟ್ಟದ ಆಯ್ಕೆ ಸಮಿತಿ, ಜಿಲ್ಲೆಗಳಿಂದ ಸಲ್ಲಿಕೆಯಾಗಿದ್ದ ಸ್ತಬ್ಧಚಿತ್ರಗಳ ಮಾದರಿಗಳನ್ನು ಪರಿಶೀಲಿಸಿ ಅಂತಿಮ ಆಯ್ಕೆ ಮಾಡಿದೆ. ಪರಿಸರ, ಕೃಷಿ, ಪ್ರಕೃತಿ, ಪ್ರವಾಸಿ ತಾಣಗಳು, ಸಾಧಕರು, ಕಲೆ ಮತ್ತು ಸಂಸ್ಕೃತಿ, ಪುಣ್ಯಕ್ಷೇತ್ರಗಳು, ಕೈಗಾರಿಕೆ, ಗ್ರಾಮೀಣ ಬದುಕು, ದಾರ್ಶನಿಕರು, ಸಾಹಿತಿಗಳು, ಸ್ವಸಹಾಯ ಸಂಘಗಳು, ನಾರಿಶಕ್ತಿ, ಶಿಕ್ಷಣ, ಜಲಪಾತ ಮತ್ತು ಅಭಯಾರಣ್ಯ ಸೇರಿದಂತೆ ಹಲವು ವಿಷಯಗಳನ್ನು ಆಧರಿಸಿ ಮಾದರಿಗಳನ್ನು ಆಹ್ವಾನಿಸಲಾಗಿತ್ತು.
ಯಾವೆಲ್ಲಾ ಜಿಲ್ಲೆಗಳ ಸ್ಥಬ್ಧಚಿತ್ರಕ್ಕೆ ಅವಕಾಶ?
ಅಂತಿಮವಾಗಿ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಬೆಂಗಳೂರು ನಗರ, ಶಿವಮೊಗ್ಗ, ಕೋಲಾರ, ಚಿಕ್ಕಬಳ್ಳಾಪುರ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಉತ್ತರ ಕನ್ನಡ, ಯಾದಗಿರಿ, ವಿಜಯನಗರ ಹಾಗೂ ಬೀದರ್ ಜಿಲ್ಲೆಗಳ ಸ್ತಬ್ಧಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ.
ಕೆಪಿಎಸ್ ಶಾಲೆಗಳ ಥೀಮ್!
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) ಅಭಿವೃದ್ಧಿಯನ್ನು ಬಿಂಬಿಸುವ ಮಾದರಿಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಸಿದ್ಧಪಡಿಸಿತ್ತು. ಜಿಲ್ಲೆಯಾದ್ಯಂತ 20ಕ್ಕೂ ಹೆಚ್ಚು ಕೆಪಿಎಸ್ ಶಾಲೆಗಳು ಅಭಿವೃದ್ಧಿಗೊಳ್ಳುತ್ತಿರುವುದು, ಪ್ರತಿ ಶಾಲೆಗೆ 6 ಕೋಟಿಯಿಂದ 8 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕಟ್ಟಡಗಳನ್ನು ನಿರ್ಮಿಸುತ್ತಿರುವುದು ಪ್ರಮುಖ ಅಂಶಗಳಾಗಿದ್ದವು. ಇದರ ಜತೆಗೆ ರಣಹದ್ದು ಸಂರಕ್ಷಣೆ, ಮೇಕೆದಾಟು ಯೋಜನೆ ಹಾಗೂ ಗ್ರಾಮೀಣ ಕೈಗಾರಿಕೆಗಳನ್ನೂ ಸ್ತಬ್ಧಚಿತ್ರದಲ್ಲಿ ಪರಿಚಯಿಸಲು ಜಿಲ್ಲಾ ಪಂಚಾಯಿತಿ ಸಿದ್ಧತೆ ಮಾಡಿಕೊಂಡಿತ್ತು. ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿದ್ದರೂ, ಹೊಸತನದ ಕೊರತೆಯ ಕಾರಣ ನೀಡಿ ಆಯ್ಕೆ ಸಮಿತಿ ಜಿಲ್ಲೆಯ ಮಾದರಿಯನ್ನು ಕೈಬಿಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಗಾರುಡಿ ಗೊಂಬೆ ಕಲಾವಿದರ ತಂಡಕ್ಕೆ ಅವಕಾಶ
ಕೆಪಿಎಸ್ ಶಾಲೆಗಳ ಅಭಿವೃದ್ಧಿ ಸೇರಿದಂತೆ ವೈವಿಧ್ಯಮಯ ವಿಷಯಗಳನ್ನು ಒಳಗೊಂಡ ಸ್ತಬ್ಧಚಿತ್ರದ ಮಾದರಿಯನ್ನು ಆಯ್ಕೆ ಸಮಿತಿಗೆ ಸಲ್ಲಿಸಲಾಗಿತ್ತು. ಆದರೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾದರಿಗೆ ಅವಕಾಶ ನೀಡಿಲ್ಲ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ ತಿಳಿಸಿದರು. ಬೆಂಗಳೂರು ದಕ್ಷಿಣ ಜಿಲ್ಲೆಯ ಸ್ತಬ್ಧಚಿತ್ರಕ್ಕೆ ಅವಕಾಶ ಸಿಗದಿದ್ದರೂ, ದಸರಾ ಮೆರವಣಿಗೆಯಲ್ಲಿ ಗಾರುಡಿ ಗೊಂಬೆ ಕಲಾವಿದರ ತಂಡಕ್ಕೆ ಅವಕಾಶ ದೊರೆತಿದೆ. ಸುಮಾರು 40 ಮಂದಿ ಕಲಾವಿದರು ಪ್ರದರ್ಶನ ನೀಡಲಿದ್ದು, ಸ್ತಬ್ಧಚಿತ್ರಗಳ ಮೆರವಣಿಗೆಯೊಂದಿಗೆ ಸಾಗಲಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಸ್ತಬ್ಧಚಿತ್ರಕ್ಕೆ ಈ ಬಾರಿ ಅವಕಾಶ ಸಿಕ್ಕಿಲ್ಲ. ಇದು ರಾಜ್ಯಮಟ್ಟದ ಆಯ್ಕೆ ಸಮಿತಿಯ ನಿರ್ಧಾರ. ಆದರೆ ದಸರಾ ಕಾರ್ಯಕ್ರಮದಲ್ಲಿ ವಿಶೇಷ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಅದರಂತೆ 40 ಮಂದಿ ಕಲಾವಿದರನ್ನು ಒಳಗೊಂಡ ಗಾರುಡಿ ಗೊಂಬೆ ತಂಡಕ್ಕೆ ಜಿಲ್ಲೆಯನ್ನು ಪ್ರತಿನಿಧಿಸುವ ಅವಕಾಶ ದೊರೆತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್ ತಿಳಿಸಿದರು.



